ಬೆಳಗಾವಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲೆಯಲ್ಲಿ ಸೋಮವಾರ ಚಾಲನೆ ಸಿಕ್ಕಿತು.
ಕೈಪಿಡಿ, ಬ್ಯಾಗ್ ಒಳಗೊಂಡ ಕಿಟ್‌ಗಳೊಂದಿಗೆ ಗಣತಿದಾರರು 15 ತಾಲ್ಲೂಕುಗಳಲ್ಲಿನ ಮನೆ–ಮನೆಗೆ ತೆರಳಿ, ಸಮೀಕ್ಷೆ ಕೈಗೊಂಡರು.
ಬೆಳಗಾವಿ ನಗರ ವ್ಯಾಪ್ತಿಯ ಸಮೀಕ್ಷೆಯನ್ನು ಇಲ್ಲಿನ ಕ್ಯಾಂಪ್ ಪ್ರದೇಶದ ಮಾರ್ಕೆಟ್ ಸ್ಟ್ರೀಟ್‌ನಿಂದ ಆರಂಭಿಸಲು ಯೋಜಿಸಲಾಗಿತ್ತು. ಐಎಎಸ್ ಪ್ರೊಬೇಷನರಿ ಅಧಿಕಾರಿ ಅಭಿನವ ಜೈನ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅಬ್ದುಲ್‌ಗಫಾರ್ ಶೇಖ್ ಅವರ ಮನೆಗೆ ಆಗಮಿಸಿ, ಮಾಹಿತಿ ಕಲೆಹಾಕಲು ಆರಂಭಿಸಿದರು. ಆದರೆ, ನೆಟ್‌ವರ್ಕ್ ಸಮಸ್ಯೆಯಿಂದ ಸಿಗದ್ದರಿಂದ ಮೊದಲ ಮನೆಯಲ್ಲೇ ಸಮೀಕ್ಷೆಗೆ ತೊಡಕಾಯಿತು.
ಹಾಗಾಗಿ ನಿರಾಸೆಗೊಂಡ ಸಿಬ್ಬಂದಿ ನೆಹರೂ ನಗರದತ್ತ ತೆರಳಿ, ಮಲ್ಲವ್ವ ಗಾಡಿವಡ್ಡರ ಅವರ ಮನೆಯಲ್ಲಿ ಬೆಳಗಾವಿ ನಗರದ ಮೊದಲ ಸಮೀಕ್ಷೆ ಕೈಗೊಂಡರು.
ಸಮೀಕ್ಷೆಗೆ ಚಾಲನೆ ನೀಡಿದ ಶಾಸಕ ಆಸಿಫ್ ಸೇಠ್, ‘ರಾಜ್ಯ ಸರ್ಕಾರದ ಆದೇಶದಂತೆ ಕೈಗೊಂಡ ಸಮೀಕ್ಷೆಗೆ 12 ಲಕ್ಷ ಮನೆಗಳನ್ನು ಗುರುತಿಸಿದ್ದೇವೆ. 10,308 ಗಣತಿದಾರರು ತಲಾ 150 ಮನೆಗಳ ಸಮೀಕ್ಷೆ ಮಾಡಿ, ಇಡೀ ಕುಟುಂಬದ ಸಮಗ್ರ ಮಾಹಿತಿ ಕಲೆಹಾಕಲಿದ್ದಾರೆ’ ಎಂದು ತಿಳಿಸಿದರು.
ಸಮೀಕ್ಷೆ ಬಗ್ಗೆ ಬಿಜೆಪಿಯವರು ಟೀಕಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸೇಠ್, ‘ಟೀಕೆ ಮಾಡುವುದೇ ಅವರ ಕೆಲಸ. ಆದರೆ, ನಾವು ಜನರ ಅನುಕೂಲತೆಗಾಗಿ ಸಮೀಕ್ಷೆ ಮಾಡುತ್ತಿದ್ದೇವೆ. ಇದರಿಂದ ಜನರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ ಅರಿಯಲು ಅನುಕೂಲವಾಗಲಿದೆ. ಸಮೀಕ್ಷೆಯಿಂದ ಧರ್ಮ ಒಡೆಯುವ ಪ್ರಶ್ನೆಯೇ ಬರುವುದಿಲ್ಲ’ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಹೆಸ್ಕಾಂ ಸಿಬ್ಬಂದಿ ಕಳೆದ ಎರಡು ವಾರಗಳಿಂದ ಪ್ರತಿ ಮನೆಗಳ ವಿದ್ಯುತ್ ಮೀಟರ್‌ಗೆ ಸ್ಟಿಕ್ಕರ್ ಅಂಟಿಸಿ, ಯೂನಿಕ್ ಹೌಸಿಂಗ್ ಐಡೆಂಟಿಫಿಕೇಷನ್(ಯುಎಚ್‌ಐಡಿ) ನಿಗದಿಪಡಿಸಿದ್ದಾರೆ. ಇದರಿಂದ ಸಮೀಕ್ಷೆ ಕೈಗೊಳ್ಳಲು ಸುಲಭವಾಗಿದೆ’ ಎಂದು ತಿಳಿಸಿದರು.
‘ಮನೆ ಹೊಂದಿರದವರು ಮತ್ತು ವಿದ್ಯುತ್ ಸೌಕರ್ಯ ಹೊಂದಿರದವರನ್ನೂ ಸಮೀಕ್ಷೆಗೆ ಒಳಪಡಿಸುತ್ತೇವೆ. ನೆಟ್‌ವರ್ಕ್ ಇರದ ಕಡೆ ಶಿಬಿರಗಳ ಮೂಲಕ ಸಮೀಕ್ಷೆ ಮಾಡುತ್ತೇವೆ. ಇಂಥ 38 ಸ್ಥಳಗಳನ್ನು ಗುರುತಿಸಿದ್ದೇವೆ. ಒಟ್ಟಾರೆಯಾಗಿ ಸಮೀಕ್ಷೆ ಯಶಸ್ವಿಯಾಗಿ ಕೈಗೊಳ್ಳಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ’ ಎಂದರು.
ಮಹಾನಗರ ಪಾಲಿಕೆ ಸದಸ್ಯ ಶಾಹೀದ್‌ಖಾನ್ ಪಠಾಣ, ಐಎಎಸ್ ಪ್ರೊಬೇಷನರಿ ಅಧಿಕಾರಿ ಅಭಿನವ ಜೈನ, ಶ್ರವಣಕುಮಾರ ನಾಯ್ಕ, ಉಪವಿಭಾಗಾಧಿಕಾರಿ, ಬೆಳಗಾವಿ ತಹಶೀಲ್ದಾರ್ ಬಸವರಾಜ ನಾಗರಾಳ ಇತರರಿದ್ದರು.
‘ಸಣ್ಣ–ಪುಟ್ಟ ತಾಂತ್ರಿಕ ಸಮಸ್ಯೆ ಬಿಟ್ಟರೆ, ಇಡೀ ಜಿಲ್ಲೆಯಲ್ಲಿ ಸಮೀಕ್ಷೆ ಸುಗಮವಾಗಿ ನಡೆಯುತ್ತಿದೆ. ತರಬೇತಿ ಪಡೆದ ಗಣತಿದಾರರು ತಮಗೆ ಕರ್ತವ್ಯಕ್ಕೆ ನಿಯೋಜಿಸಿದ ಸ್ಥಳದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.