ADVERTISEMENT

ನಕ್ಸಲ್ ಗುಂಡಿಗೆ ಬೆಳಗಾವಿಯ ಖಾನಾಪುರ ಯೋಧ ಬಲಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 13:44 IST
Last Updated 17 ಮಾರ್ಚ್ 2019, 13:44 IST
   

ಖಾನಾಪುರ (ಬೆಳಗಾವಿ ಜಿಲ್ಲೆ): ಪಶ್ಚಿಮ ಬಂಗಾಳದಲ್ಲಿ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಬಿಎಸ್‌ಎಫ್‌ ಯೋಧ ರಾಹುಲ್‌ ವಸಂತ ಶಿಂಧೆ (25) ಹುತಾತ್ಮರಾಗಿದ್ದಾರೆ.

ಕರ್ತವ್ಯ ಮುಗಿಸಿ ಶಿಬಿರದತ್ತ ಹೊರಟಿದ್ದ ನಾಲ್ವರು ಗಡಿಭದ್ರತಾ ಪಡೆಯ ಯೋಧರಿದ್ದ ವಾಹನದ ಮೇಲೆ ನಕ್ಸಲರು ಭಾನುವಾರ ಮುಂಜಾನೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ನಾಲ್ವರೂ ಮೃತರಾಗಿದ್ದಾರೆ.

ಅವರು 117ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಿಎಸ್‌ಎಫ್‌ ಅಧಿಕಾರಿಗಳು ಕುಟುಂಬಕ್ಕೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಭಾನುವಾರ ಮಧ್ಯಾಹ್ನವೇ ಪಾರ್ಥೀವ ಶರೀರ ಕಳುಹಿಸಲಾಗಿದೆ. ಪಾರ್ಥಿವ ಶರೀರ ಹೊತ್ತ ಸೇನಾ ವಿಮಾನ ಭಾನುವಾರ ರಾತ್ರಿ ಗೋವಾಗೆ ಬರಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿಸೋಮವಾರ ಬೆಳಿಗ್ಗೆ ತಾಲ್ಲೂಕಿಗೆ ತರಲಾಗುವುದು. ಮಧ್ಯಾಹ್ನ ನಾವಗಾ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ADVERTISEMENT

‘ವಸಂತ-ಸುಜಾತಾ ದಂಪತಿಯ ಕಿರಿಯ ಪುತ್ರ ರಾಹುಲ್‌, 2012ರಲ್ಲಿ ಬಿಎಸ್ಎಫ್‌ಗೆ ಸೇರಿದ್ದರು. ಅವರ ಸಹೋದರ ಇಂಡೋ–ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಪಡೆಯಲ್ಲಿದ್ದಾರೆ. ತಾಲ್ಲೂಕಿನ ಚಾಪಗಾಂವದ ಯುವತಿಯೊಂದಿಗೆ ಕಳೆದ ಡಿ. 14ರಂದು ರಾಹುಲ್ ನಿಶ್ಚಿತಾರ್ಥ ನಡೆದಿತ್ತು. ಮೇ ತಿಂಗಳಲ್ಲಿ ಬೇಸಿಗೆ ರಜೆಯಲ್ಲಿ ಮದುವೆಗೂ ನಿಶ್ಚಯಿಸಲಾಗಿತ್ತು. ಡಿಸೆಂಬರ್‌ನಲ್ಲಿ ಊರಿಗೆ ಬಂದಿದ್ದ ರಾಹುಲ್‌, ತಂದೆಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡಿದ್ದರು. ಭತ್ತವನ್ನು ರಾಶಿ ಮಾಡಿದ್ದರು. ಮೇಗೆ ಬರುವುದಾಗಿ ಹೇಳಿ ಹೋಗಿದ್ದ’ ಎಂದು ಹೇಳಿದ ಅವರ ಸಂಬಂಧಿ ಪುಂಡಲೀಕ ಚೋಪಡೆ ಗದ್ಗದಿತರಾದರು.

ಗ್ರಾಮದಲ್ಲಿ ಮೌನ ಆವರಿಸಿದೆ. ಬಿಜೆಪಿ ಮುಖಂಡ ಜ್ಯೋತಿಬಾ ರೇಮಾಣಿ, ಮುಖಂಡ ಪುಂಡಲೀಕ ಕಾರಲಗೇಕರ ಸೇರಿದಂತೆ ನೂರಾರು ಮಂದಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ತಾಲ್ಲೂಕು ಆಡಳಿತ ಮತ್ತು ಪೊಲೀಸರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.