ADVERTISEMENT

ಸಂಚಾರಿ ಪೀಠದಿಂದ ತ್ವರಿತವಾಗಿ ವ್ಯಾಜ್ಯಗಳ ವಿಲೇವಾರಿಗೆ ಅನುಕೂಲ: ಮುನಿಯಪ್ಪ

ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 11:03 IST
Last Updated 5 ಫೆಬ್ರುವರಿ 2025, 11:03 IST
<div class="paragraphs"><p>ಬೆಳಗಾವಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠದ ಉದ್ಘಾಟನೆ&nbsp; ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್‌.ಮುನಿಯಪ್ಪ&nbsp; ಮಾತನಾಡಿದರು. ಸಚಿವರಾದ ಸತೀಶ ಜಾರಕಿಹೊಳಿ, ಎಚ್‌.ಕೆ.ಪಾಟೀಲ, ಸಂಸದ ಜಗದೀಶ ಶೆಟ್ಟರ್‌ ಇತರರಿದ್ದಾರೆ</p></div>

ಬೆಳಗಾವಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠದ ಉದ್ಘಾಟನೆ  ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್‌.ಮುನಿಯಪ್ಪ  ಮಾತನಾಡಿದರು. ಸಚಿವರಾದ ಸತೀಶ ಜಾರಕಿಹೊಳಿ, ಎಚ್‌.ಕೆ.ಪಾಟೀಲ, ಸಂಸದ ಜಗದೀಶ ಶೆಟ್ಟರ್‌ ಇತರರಿದ್ದಾರೆ

   

ಬೆಳಗಾವಿ: ‘ಈ ಭಾಗದಲ್ಲಿ ಗ್ರಾಹಕರ ಹಕ್ಕುಗಳ ಸಂರಕ್ಷಣೆಗಾಗಿ ಸಂಚಾರಿ ಪೀಠದ ಅಗತ್ಯತೆ ಹೆಚ್ಚಿತ್ತು. ಈಗ ಪೀಠ ಆರಂಭಗೊಂಡ ಕಾರಣ, ಗ್ರಾಹಕರ ವ್ಯಾಜ್ಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅನುಕೂಲವಾಗಲಿದೆ’ ಎಂದು ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ಇಲ್ಲಿನ ಆಟೋ ನಗರದ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ಕಟ್ಟಡದ ಮೂರನೇ ಮಹಡಿಯ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಬುಧವಾರ ಆರಂಭಗೊಂಡ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠದ ಉದ್ಘಾಟನೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಈ ಹಿಂದೆ ಗ್ರಾಹಕರ ವ್ಯಾಜ್ಯಗಳಿದ್ದರೆ, ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆದಾಡಬೇಕಾಗಿತ್ತು. ಓಡಾಟಕ್ಕೆ ಹೆಚ್ಚಿನ ಹಣ ವ್ಯಯಿಸಬೇಕಾಗಿತ್ತು. ಆದರೆ, ಈಗ ತ್ವರಿತವಾಗಿ ನ್ಯಾಯ ಪಡೆಯಲು ಗ್ರಾಹಕರಿಗೆ ಅನುಕೂಲವಾಗಲಿದೆ. ಹಣದ ಉಳಿತಾಯವೂ ಆಗಲಿದೆ’ ಎಂದು ತಿಳಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನಿರಂತರ ಪ್ರಯತ್ನದಿಂದಾಗಿ ಇಂದು ಕಾಯಂ ಸಂಚಾರಿ ಪೀಠ ಉದ್ಘಾಟನೆಯಾಗುತ್ತಿದೆ. ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಬೆಳಗಾವಿ ಜಿಲ್ಲೆಯಲ್ಲೇ 2 ಸಾವಿರಕ್ಕೂ ಅಧಿಕ ಗ್ರಾಹಕರ ವ್ಯಾಜ್ಯಗಳು ವಿಲೇವಾರಿಯಾಗದೆ ಉಳಿದಿವೆ. ಅವುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಪೀಠ ಪ್ರಯತ್ನಿಸಬೇಕು’ ಎಂದರು.

‘ಗ್ರಾಹಕರಿಗೆ ತಮ್ಮ ಹಕ್ಕುಗಳ ಸಮೇತವಾಗಿ, ಸೇವೆಗಳನ್ನೂ ಪಡೆಯಲು ಈ ಪೀಠ ನೆರವಾಗಬೇಕು. ಜನಪರ ಮತ್ತು ಜನೋಪಯೋಗಿ ಸಂಚಾರಿ ಪೀಠವಾಗಿ ಇದು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಬೆಳಗಾವಿಯಲ್ಲಿ ಸಂಚಾರಿ ಪೀಠದ ಸ್ಥಾಪನೆಗೆ ನಾಲ್ಕು ವರ್ಷಗಳಿಂದ ಹೋರಾಟ ನಡೆದಿತ್ತು. ಆದರೆ, ಸ್ಥಳದ ಅಭಾವದಿಂದಾಗಿ ಪೀಠ ಆರಂಭಗೊಂಡಿರಲಿಲ್ಲ. ಈಗ ಆರಂಭವಾದ ಪೀಠಕ್ಕೆ ಅಗತ್ಯವಿರುವ ಪೀಠೋಪಕರಣ, ಸೌಕರ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

‘ಬೆಂಗಳೂರು ಮಾದರಿಯಲ್ಲಿ ಬೆಳಗಾವಿ ಮಹಾನಗರ ಈಗ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಸರ್ಕಾರ ಇನ್ನೂ ಅನೇಕ ಸೌಕರ್ಯ ಕಲ್ಪಿಸಲಿದೆ’ ಎಂದು ಹೇಳಿದರು.

ಸಂಸದ ಜಗದೀಶ ಶೆಟ್ಟರ್‌, ‘ಸಂಚಾರಿ ಪೀಠಕ್ಕೆ ತ್ವರಿತವಾಗಿ ನ್ಯಾಯಾಧೀಶರನ್ನು ನೇಮಿಸಬೇಕು. ಗ್ರಾಹಕರ ಹಲವು ವ್ಯಾಜ್ಯಗಳು 10 ವರ್ಷಗಳಿಂದಲೂ ವಿಲೇವಾರಿಯಾಗದೆ ಬಾಕಿ ಇವೆ. ಮುಂದಿನ ದಿನಗಳಲ್ಲೂ ಈ ಪರಿಸ್ಥಿತಿ ನಿರ್ಮಾಣವಾಗಬಾರದು. ಗ್ರಾಹಕರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು. ಗ್ರಾಹಕರ ಹಕ್ಕುಗಳ ಬಗ್ಗೆಯೂ ಅರಿವು ಮೂಡಿಸುವ ಕಾರ್ಯವಾಗಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ(ಹೆಚ್ಚುವರಿ ಪೀಠ) ಸದಸ್ಯೆ ಸುನೀತಾ ಬಾಗೇವಾಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಂಜೀವ ಕುಲಕರ್ಣಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ(ಹೆಚ್ಚುವರಿ ಪೀಠ) ಅಧ್ಯಕ್ಷ ಮಹಾಂತೇಶ ಶಿಗ್ಲಿ, ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ಕಿವುಡಸಣ್ಣವರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.