ADVERTISEMENT

ಕಬ್ಬು ಬೆಳೆಗಾರರ ಸಭೆ, ಇಳುವರಿ ಪರಿಶೀಲನೆಗೆ ಕ್ರಮ- ಡಾ.ಅಜಯ್ ನಾಗಭೂಷಣ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 20:23 IST
Last Updated 18 ನವೆಂಬರ್ 2018, 20:23 IST

ಬೆಳಗಾವಿ: ಜಿಲ್ಲೆಯ ಎಲ್ಲ 23 ಕಾರ್ಖಾನೆಗಳಲ್ಲಿ ಇಳುವರಿ ಪ್ರಮಾಣವನ್ನು ಡಿಸೆಂಬರ್ ಅಂತ್ಯದವರೆಗೆ ಕಡ್ಡಾಯವಾಗಿ ಪರಿಶೀಲನೆ ನಡೆಸಲಾಗುವುದು. ಅದೇ ರೀತಿ ರೈತರ ಸಲಹೆ ಮೇರೆಗೆ ಇಳುವರಿ ಸ್ಯಾಂಪ್ಲರ್ ಯಂತ್ರ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಬ್ಬು ಅಭಿವೃದ್ಧಿ ನಿರ್ದೇಶನಾಲಯದ ಆಯುಕ್ತ ಡಾ.ಅಜಯ್ ನಾಗಭೂಷಣ್ ಭರವಸೆ ನೀಡಿದರು.

ಇಲ್ಲಿ ನಡೆದ ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೂಕದಲ್ಲಾಗುವ ಮೋಸ ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿದ ತೂಕಯಂತ್ರ ಅಳವಡಿಸಲು ಎಲ್ಲ ಕಾರ್ಖಾನೆಗಳಿಗೆ ಆದೇಶ ಮಾಡಲಾಗುವುದು. ರೈತರಿಂದ ಪಡೆಯುವ ಕಬ್ಬಿನ ತೂಕದಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲು ಇರುವ ಮಾರ್ಗಗಳ ಬಗ್ಗೆ ರೈತರು ಸಲಹೆ ನೀಡಿದರೆ ಅದನ್ನು ಸರ್ಕಾರದ ಮಾರ್ಗಸೂಚಿಯಲ್ಲಿ ಅಳವಡಿಸಲಾಗುತ್ತದೆ ಎಂದರು.

ADVERTISEMENT

ಎಫ್.ಆರ್. ಪಿ. ನಿಗದಿ ಮಾಡುವುದು ರಾಷ್ಟ್ರವ್ಯಾಪಿಗೆ ಸಂಬಂಧಿಸಿದ ವಿಷಯ. ಇದನ್ನು ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಡಾ.ನಾಗಭೂಷಣ್ ಹೇಳಿದರು. ಸಾರಿಗೆ ವೆಚ್ಚ ಕಡಿತದ ಕುರಿತು ಒಂದು ತಿಂಗಳಿನಲ್ಲಿ ಅಧ್ಯಯನ ಮಾಡಿ ಈ ಬಗ್ಗೆ ಕಾರ್ಖಾನೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಅವರು ತಿಳಿಸಿದರು.

ಕಳೆದ ವರ್ಷ ಜಿಲ್ಲೆಯ 22 ಕಾರ್ಖಾನೆಗಳಲ್ಲಿ ಹನ್ನೊಂದು ಕಾರ್ಖಾನೆಯವರು ಎಲ್ಲ ರೈತರಿಗೂ ಒಂದೇ ದರ ಹಾಗೂ ಎಫ್.ಆರ್.ಪಿ.ಗಿಂತ ಹೆಚ್ಚಿನ ದರ ನೀಡಿದ್ದಾರೆ.ಉಳಿದ ಕಾರ್ಖಾನೆಯವರು ಬೇರೆ ಬೇರೆ ಬಿಲ್ ಪಾವತಿಸಿದ್ದು, ಕೆಲವರು ಹೆಚ್ಚು ಘೋಷಣೆ ಮಾಡಿ ಕಡಿಮೆ ಪಾವತಿಸಿದ್ದಾರೆ ಎಂಬ ದೂರುಗಳಿವೆ. ಅದನ್ನು ಕಾರ್ಖಾನೆವಾರು ಪರಿಶೀಲಿಸಲಾಗುವುದು ಎಂದರು.

ರೈತರು, ಕಾರ್ಖಾನೆಗಳ ಆಡಳಿತ ಮಂಡಳಿಯವರು ಹಾಗೂ ಅಧಿಕಾರಿಗಳು ನಿಯಮಿತವಾಗಿ ಪರಸ್ಪರ ಸಭೆ-ಚರ್ಚೆಗಳನ್ನು ನಡೆಸುವ ಮೂಲಕ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಕೋರಿದರು.

ಮಹಾರಾಷ್ಟ್ರ ಮಾದರಿಗೆ ಒತ್ತಾಯ:ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕಬ್ಬಿನ ಇಳುವರಿ ಒಂದೇ ರೀತಿಯಾಗಿರುವುದರಿಂದ ದರ ಕೂಡ ಮಹಾರಾಷ್ಟ್ರ ಮಾದರಿಯಲ್ಲಿಯೇ ನಿಗದಿಪಡಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ಮುಟ್ಟುಗೋಲು ಹಾಕಿಕೊಂಡಿರುವ ಸಕ್ಕರೆ ಖರೀದಿಗೆ ಟೆಂಡರ್ ದಾರರು ಭಾಗವಹಿಸದಿದ್ದರೆ ಸರ್ಕಾರವೇ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ವಿತರಿಸಬೇಕು. ಇದರಿಂದ ರೈತರಿಗೆ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಖಾನೆಗಳು ಬಾಕಿ ಪಾವತಿಸಿರುವುದಾಗಿ ಜಿಲ್ಲಾಡಳಿತ ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶನಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿವೆ. ಆದರೆ ವಾಸ್ತವದಲ್ಲಿ ಅವರು ಬಿಲ್ ಪಾವತಿಸದೇ ರೈತರನ್ನು ಸತಾಯಿಸುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡ ಭೀಮಪ್ಪ ಗಡಾದ ಮಾತನಾಡಿ, ಜಿಲ್ಲಾಧಿಕಾರಿಯು ಬಾಕಿ ಪಾವತಿಸಲು ಕಾರ್ಖಾನೆಗಳಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಿದ್ದಾರೆ. ಆ ಪ್ರಕಾರ ಬಾಕಿ ವಸೂಲಿ ಮಾಡಬೇಕು ಎಂದು ಮನವಿ ಮಾಡಿದರು.

ಮುಂಬರುವ ದಿನಗಳಲ್ಲಿ ಬಾಕಿ ಪಾವತಿಸದೇ ಇರುವ ಕಾರ್ಖಾನೆಗಳಿಗೆ ಸಕ್ಕರೆ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಹೇಳಿದರು. ಮುಖಂಡಸಂಜಯ ನಾಡಗೌಡ ಮಾತನಾಡಿ, ಹದಿನೈದು ಕಿಲೋಮೀಟರ್ ಸುತ್ತಳತೆಯಲ್ಲಿ ಸಾಕಷ್ಟು ಕಬ್ಬು ಲಭ್ಯವುದ್ದರೂ ಬೇರೆ ಕಡೆಯಿಂದ ಕಬ್ಬು ತರಿಸಿಕೊಂಡು ಅದರ ಸಾರಿಗೆ ವೆಚ್ವದ ಹೊರೆಯನ್ನು ಸ್ಥಳೀಯ ಕಬ್ಬು ಬೆಳೆಗಾರರ ಮೇಲೆ ಹೇರಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಮುಖಂಡ ಅಪ್ಪಸಾಹೇಬ್ ಚೌಗಲೆ ಮಾತನಾಡಿ, ಸಕ್ಕರೆ ದರ ಆಧರಿಸಿ ನೀಡಲಾಗುವ ಎರಡು ಹಾಗೂ ಮೂರನೇ ಹಂತದ ಬಿಲ್ ನೀಡುವಾಗ ಮಹಾರಾಷ್ಟ್ರದ ಮಾದರಿಯಲ್ಲಿ ನೀಡಬೇಕು ಎಂದರು. ಎಫ್.ಆರ್.ಪಿ. ನೆಪದಲ್ಲಿ ಕಾರ್ಖಾನೆಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದು, ಇದರ ಬದಲು ಮುಂಚಿನ ರೀತಿಯಲ್ಲಿ ಎಸ್.ಎ.ಪಿ ದರ ಘೋಷಿಸಲು ಕ್ರ‌ಮ ವಹಿಸಬೇಕು ಎಂದು ಸಲಹೆ ನೀಡಿದರು. ಸಕ್ಕರೆ ಕಾರ್ಖಾನೆಗಳ ಇಳುವರಿ ಆಧರಿಸಿ ದರ ನಿಗದಿಪಡಿಸಲಾಗುತ್ತಿದ್ದು, ಇಳುವರಿ ಸ್ಯಾಂಪ್ಲರ್ ಯಂತ್ರ ಅಳವಡಿಸಲು ಆಗ್ರಹಿಸಿದರು.
ಗುಜರಾತ್ ರಾಜ್ಯದಲ್ಲಿ ಕನಿಷ್ಠ 3700 ಹಾಗೂ ಗರಿಷ್ಠ 4400 ರೂಪಾಯಿ ದರ ನೀಡಲಾಗುತ್ತದೆ. ಇಲ್ಲಿ ಇಳುವರಿ ಉತ್ತಮ ಇದ್ದರೂ ದರ ಅತ್ಯಂತ ಕಡಿಮೆ ಏಕೆ ಎಂದು ರೈತರು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ, ಎಸ್ಪಿ ಸುಧೀರಕುಮಾರ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬೂದೆಪ್ಪ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ರೈತ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.