ಬೆಳಗಾವಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು ತಮ್ಮನ್ನು ನಿಯೋಜಿಸಿರುವುದಕ್ಕೆ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು, ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು.
ಬೆಳಗಾವಿ ನಗರ ವಲಯದ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸಮೀಕ್ಷೆ ನಡೆಸುವ ಬಗ್ಗೆ, ಇಲ್ಲಿನ ಶಿವಬಸವ ನಗರದ ಕೆಪಿಟಿಸಿಎಲ್ ಭವನದಲ್ಲಿ ಸೋಮವಾರ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಸಮೀಕ್ಷೆ ಬಗ್ಗೆ ನಮಗೆ ಮೊದಲೇ ಮಾಹಿತಿ ಕೊಟ್ಟಿಲ್ಲ. ಈಗ ಏಕಾಏಕಿಯಾಗಿ ತರಬೇತಿ ನೀಡಿ, ಮಂಗಳವಾರದಿಂದ ಸಮೀಕ್ಷೆ ಮಾಡುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲ’ ಎಂದು ಶಿಕ್ಷಕರು, ಸಿಬ್ಬಂದಿ ದೂರಿದರು.
‘ಸಮೀಕ್ಷೆ ಬಗ್ಗೆ ಮೊದಲೇ ತಿಳಿಸಿದರೆ ನಾವು ಸಿದ್ಧರಾಗುತ್ತೇವೆ. ಆದರೆ, ಯಾವ ಮಾಹಿತಿ ನೀಡದೆ ಈಗ ಪ್ರೌಢಶಾಲೆ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಿದ್ದಾರೆ. ಗರ್ಭಿಣಿಯಾಗಿರುವ ನನಗೆ ದಿಕ್ಕೇ ತೋಚುತ್ತಿಲ್ಲ’ ಎಂದು ಶಿಕ್ಷಕಿಯೊಬ್ಬರು ಕಣ್ಣೀರು ಸುರಿಸಿದರು.
ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಮತ್ತಿತರ ಅಧಿಕಾರಿಗಳು ಈ ವಿಷಯವಾಗಿ ಚರ್ಚಿಸಿ, ಶಿಕ್ಷಕರು ಮತ್ತು ಸಿಬ್ಬಂದಿ ಮನವೊಲಿಕೆಗೆ ಯತ್ನಿಸಿದರು.
‘ಈಗ ಸಮಸ್ಯೆ ಬಗೆಹರಿದಿದ್ದು, ಸಮೀಕ್ಷೆ ಮಾಡಲು ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿ ಒಪ್ಪಿದ್ದಾರೆ. ಅವರಿಗೆ ತರಬೇತಿಯನ್ನೂ ಕೊಟ್ಟಿದ್ದೇವೆ. ಗರ್ಭಿಣಿಯರು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಸೇವಾನಿವೃತ್ತಿ ಅಂಚಿನಲ್ಲಿ ಇರುವವರಿಗೆ ವಿನಾಯಿತಿ ಕೊಡಲಾಗುವುದು’ ಎಂದು ರವಿ ಭಜಂತ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.