ಗರ್ಭಪಾತ ಪ್ರಕರಣಗಳು
ಬೆಳಗಾವಿ: ಜಿಲ್ಲೆಯ ಗೋಕಾಕ ನಗರ ಹಾಗೂ ಮೂಡಲಗಿ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಮಾಡುತ್ತಿದ್ದ ಎರಡು ಆಸ್ಪತ್ರೆಗಳನ್ನು ಬೆಂಗಳೂರಿನ ವಿಶೇಷ ಅಧಿಕಾರಿಗಳ ತಂಡ ಸೋಮವಾರ ಬಂದ್ ಮಾಡಿದೆ. ಇಬ್ಬರು ವೈದ್ಯರು ಮತ್ತು ಒಬ್ಬ ಏಜೆಂಟ್‌ನನ್ನು ವಶಕ್ಕೆ ಪಡೆಯಲಾಗಿದೆ.
ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರಗಳ ಅಧಿನಿಯಮದ (ಪಿಸಿಪಿಎನ್‌ಡಿಟಿ) ಅಧಿಕಾರಿಗಳ ತಂಡವು ಗೋಕಾಕ, ಮೂಡಲಗಿ ಹಾಗೂ ಮಮದಾಪುರ ಗ್ರಾಮದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿತು.
‘ಗೋಕಾಕದ ಇಕ್ರಾ ಆಸ್ಪತ್ರೆ ಸ್ತ್ರೀರೋಗ ತಜ್ಞ ಡಾ.ಕುಟೆಜುಲ್ಲಾ ಕುಬ್ರಾ, ಮೂಡಲಗಿಯ ಡಾ.ಎಸ್.ಎಸ್.ಪಾಟೀಲ, ಏಜೆಂಟ್ ತುಕಾರಾಮ ಭೀಮಪ್ಪ ಖೋತ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಎರಡೂ ಆಸ್ಪತ್ರೆಗಳಲ್ಲಿ ಅಂದಾಜು 80 ಭ್ರೂಣಲಿಂಗ ಪತ್ತೆ ಮಾಡಿದ ದಾಖಲೆಗಳು ಸಿಕ್ಕಿವೆ. ಅದರಲ್ಲಿ 40 ಮಂದಿಗೆ ಈಗಾಗಲೇ ಗರ್ಭಪಾತ ಮಾಡಿಸಲಾಗಿದೆ. ಮಮದಾಪುರದ ವೈದ್ಯ ಡಾ.ಸಿದ್ಧಾರೂಢ ಪೂಜಾರಿ ತಲೆಮರೆಸಿಕೊಂಡಿದ್ದು, ತನಿಖೆ ಪ್ರಕ್ರಿಯೆ ನಡೆದಿದೆ’ ಎಂದು ಪಿಸಿಪಿಎನ್‌ಡಿಟಿ ಕಾಯ್ದೆ ಉಪನಿರ್ದೇಶಕ ಡಾ.ವಿವೇಕ್ ತಿಳಿಸಿದ್ದಾರೆ.
‘ಗೋಕಾಕ ಮತ್ತು ಮೂಡಲಗಿಯಲ್ಲಿನ ಗರ್ಭಪಾತ ಪ್ರಕರಣಗಳು ಮಂಡ್ಯದಲ್ಲಿ ಪತ್ತೆಯಾದ ಪ್ರಕರಣದಂತೆ ಇವೆ. ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನೂ ದೂರವಿಟ್ಟು ನಾವು ದಾಳಿ ನಡೆಸಿದ್ದೇವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಬಂದ್ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.
‘ದಾಳಿ ವೇಳೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಂದ ಸಂಗ್ರಹಿಸಿದ್ದ ₹1.08 ಲಕ್ಷ ಹಣ, ₹20 ಸಾವಿರ ಫೋನ್ ಪೇ ವರ್ಗಾವಣೆ ಆಗಿದ್ದ ಹಣ, ಸ್ಕ್ಯಾನಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ವೈದ್ಯರ ನಾಲ್ಕು ವರ್ಷಗಳಿಂದ ಈ ಅಕ್ರಮ ನಡೆಸುತ್ತಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದಿದ್ದಾರೆ.
ಅಕ್ರಮ ಪತ್ತೆ ಮಾಡಲು ಗರ್ಭಿಣಿಯೊಬ್ಬರು ಅಧಿಕಾರಿಗಳ ತಂಡಕ್ಕೆ ನೆರವಾದರು. ಸೋಮವಾರ ನಾಲ್ವರು ಗರ್ಭಿಣಿಯರು ಏಜೆಂಟ್ ಮೂಲಕ ಗರ್ಭಪಾತಕ್ಕೆ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ತಂಡದೊಂದಿಗೆ ಇದ್ದ ಮಹಿಳೆ ಕೂಡ ಸೇರಿಕೊಂಡರು. ಏಜೆಂಟ್‌ಗೆ ₹15 ಸಾವಿರ ಹಾಗೂ ಗರ್ಭಪಾತ ಮಾಡುವ ವೈದ್ಯರಿಗೆ ₹20 ಸಾವಿರ ನಿಗದಿ ಮಾಡಲಾಗಿತ್ತು. ಹಣ ವರ್ಗಾವಣೆ ಆಗುತ್ತಿದ್ದಂತೆಯೇ ಅಧಿಕಾರಿಗಳು ದಾಳಿ ನಡೆಸಿದರು.
ಅಕ್ರಮ ಬಯಲಿಗೆಳೆಯಲು ನೆರವಾದ ಮಹಿಳೆಗೆ ಅಧಿಕಾರಿಗಳು ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ. ಅಲ್ಲದೇ, ಗರ್ಭಪಾತಕ್ಕೆ ಒಳಗಾಗಲು ಬಂದಿದ್ದ ಉಳಿದ ಮೂವರ ಮೇಲೂ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.