ADVERTISEMENT

ಮೃಗಾಲಯ ಅಭಿವೃದ್ಧಿಗೆ ಕ್ರಮ: ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:11 IST
Last Updated 6 ಜನವರಿ 2019, 13:11 IST
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿ ಮೃಗಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ಸಂಸದ ಸುರೇಶ ಅಂಗಡಿ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಇದ್ದಾರೆ
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿ ಮೃಗಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ಸಂಸದ ಸುರೇಶ ಅಂಗಡಿ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಇದ್ದಾರೆ   

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ₹ 50 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಮೃಗಾಲಯದಲ್ಲಿ ನಗರಪಾಲಿಕೆಯಿಂದ ₹ 2 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಂಪೌಂಡ್‌ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಮೃಗಾಲಯವನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಹಿಂದಿನಿಂದಲೂ ಇದೆ. ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ಇಲ್ಲಿ ಹುಲಿ ಸಫಾರಿಗೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಆದಷ್ಟು ಬೇಗ 2 ಹುಲಿಗಳನ್ನು ತರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇತರ ಪ್ರಾಣಿಗಳನ್ನು ತರಿಸಿ, ಆಕರ್ಷಕಗೊಳಿಸಲಾಗುವುದು. ಉದ್ಯಾನ ಹಾಗೂ ಮೃಗಾಲಯದ ಸಮರ್ಪಕ ನಿರ್ವಹಣೆಗೆ ಪೂರಕವಾಗಿ, ಸಮೀಪದ ಮಾರ್ಕಂಡೇಯ ನದಿಯಿಂದ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮೃಗಾಲಯ ಪ್ರಾಧಿಕಾರದ ನಿಯಮಗಳ ಅನುಸಾರ,1.85 ಕಿ.ಮೀ. ಉದ್ದದ ಹಾಗೂ 8 ಅಡಿ ಎತ್ತರದ ಕಾಂಪೌಂಡ್‌ ನಿರ್ಮಿಸಲಾಗುವುದು. 34 ಹೆಕ್ಟೇರ್‌ನಲ್ಲಿ ಹುಲಿ ಸಫಾರಿಗೆ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಈಗಿರುವ ಕೆಲವು ಪ್ರಾಣಿಗಳೊಂದಿಗೆ ಒಟ್ಟು 18 ರೀತಿಯ ಪ್ರಾಣಿ– ಪಕ್ಷಿಗಳನ್ನು ಇಡಲು ಉದ್ದೇಶಿಸಲಾಗಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ. ಕುರಣಾಕರ್‌ ತಿಳಿಸಿದರು.

ಸಂಸದ ಸುರೇಶ ಅಂಗಡಿ, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್‌ ಮಧುಶ್ರೀ ಪೂಜಾರಿ, ‍ಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಅಮರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.