ADVERTISEMENT

‘ಬೆಳಕು’ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 16:23 IST
Last Updated 21 ಡಿಸೆಂಬರ್ 2021, 16:23 IST
‘ಬೆಳಕು’ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
‘ಬೆಳಕು’ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ   

ಬೆಳಗಾವಿ: ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಬಾಯವ್ವ ಸಿದ್ರಾಮನಿ ಅವರ ಮನೆಗೆ ಸಾಂಕೇತಿಕವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸುವ ಮೂಲಕ ‘ಬೆಳಕು’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಚಾಲನೆ ನೀಡಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಲಕ್ಷಾಂತರ ಕುಟುಂಬಗಳು ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲದೆ ಬದುಕು ಸಾಗಿಸುತ್ತಿದ್ದವು. ಅಂಥವರಿಗೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈವರೆಗೆ ಬೆಳಕು ಯೋಜನೆಯಡಿ 1.44 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ’ ಎಂದರು.

ಹಿಂದಿನ ಸರ್ಕಾರಗಳ ಶಾಕ್‌ ಕೊಡುತ್ತಿದ್ದವು

ADVERTISEMENT

‘ಹಿಂದಿನ ಸರ್ಕಾರಗಳು ಜನರಿಗೆ ಶಾಕ್ ನೀಡಿದ್ದವು. ವಿದ್ಯುತ್ ಪರಿವರ್ತಕಗಳು ಸುಟ್ಟರೆ, ದುರಸ್ತಿಗಾಗಿ ಸ್ವತಃ ರೈತರೇ ಟ್ರ್ಯಾಕ್ಟರ್‌ಗಳಲ್ಲಿ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇತ್ತು. ನಾವು ರೈತರು, ಬಡವರ ಮನೆಗಳು ಹಾಗೂ ರೈತರ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿದ್ದೇವೆ. ಇಂಧನ ಇಲಾಖೆಗೆ ಕಾಯಕಲ್ಪ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

‘ಇಂದು ವಿದ್ಯುತ್ ಶಕ್ತಿ ಇಲ್ಲದೆ ಬದುಕೇ ಇಲ್ಲ. ಜನರ ಆರ್ಥಿಕ ಮಟ್ಟ ಸುಧಾರಣೆಗಾಗಿ ನೀರಾವರಿ ಪಂಪ್‍ಸೆಟ್‍ಗಳು, ಕಾರ್ಖಾನೆಗಳು, ಗಿರಣಿಗಳಿಗೂ ವಿದ್ಯುತ್ ಅಗತ್ಯ. ಹಾಗಾಗಿ ಜನರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ. ಇಂದು ಗ್ರಾಮೀಣ ಬದುಕು ಬಹಳ ಬದಲಾವಣೆಯಾಗಿದೆ. ಹಳ್ಳಿಗಳಿಗೆ 24x7 ಮಾದರಿಯಲ್ಲಿ ಸಿಂಗಲ್ ಫೇಸ್ ಹಾಗೂ 7 ತಾಸು ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ' ಎಂದರು.

‘ನಮ್ಮ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ’ ಎಂದು ಹೇಳಿದರು.

‘ಬೆಳಕು’ ಯೋಜನೆ ಕೈಪಿಡಿ ಬಿಡುಗಡೆ ಮಾಡಿದ ಇಂಧನ ಸಚಿವ ವಿ.ಸುನೀಲ್‌ಕುಮಾರ್‌, ‘ವಿದ್ಯುತ್ ರಹಿತ ಕುಟುಂಬಗಳಿಗೆ ಈ ಯೋಜನೆ ನೆರವಾಗಿದೆ. ಒಂದೆರಡು ತಿಂಗಳಲ್ಲಿ ರಾಜ್ಯದಾದ್ಯಂತ ವಿದ್ಯುತ್ ರಹಿತ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.‌

‘ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ ತೋಟದ ಮನೆಗಳಿಗೆ ವಿದ್ಯುತ್ ಒದಗಿಸುವ ಸಲುವಾಗಿ ಪ್ರಾಯೋಗಿಕವಾಗಿ ಸಮೀಕ್ಷೆ ಆರಂಭಿಸಲಾಗಿದೆ. 160 ವಿದ್ಯುತ್ ಪರಿವರ್ತಕ ಬ್ಯಾಂಕ್ ಹಾಗೂ 162 ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಗಳನ್ನೂ ತೆರೆಯಲಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ‘ಉತ್ತರ ಕರ್ನಾಟಕದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಣೆಯಾಗಬೇಕು. ಹೊಸ ಯೋಜನೆಗಳು ಬೆಂಗಳೂರು ಕೇಂದ್ರಿತ ಆಗಬಾರದು. ಇಲ್ಲಿಗೂ ನ್ಯಾಯ ಒದಗಿಸಬೇಕು. ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ‘ವಿದ್ಯುತ್ ಪರಿವರ್ತಕಗಳ ಮೇಲೆ ಹೆಚ್ಚುತ್ತಿರುವ ಒತ್ತಡ ನಿವಾರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿಗಳನ್ನು ಸರಿಪಡಿಸಿ ಬೆಳೆ ಹಾನಿ ತಪ್ಪಿಸಬೇಕು’ ಎಂದು ಕೋರಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಸಿದ್ರಾಮನಿ, ಬಸನಗೌಡ ಸಿದ್ರಾಮನಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್. ಮಂಜುಳಾ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.