ADVERTISEMENT

ಬೆಳವಡಿ ಮಲ್ಲಮ್ಮ ಉತ್ಸವದಲ್ಲಿ ಜಟ್ಟಿಗಳ ಕಾದಾಟ: ಬ್ರೆಜಿಲ್‌ ಪೈಲ್ವಾನ ಮಣಿಸಿದ ಅಜಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:18 IST
Last Updated 3 ಮಾರ್ಚ್ 2026, 2:18 IST
ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಅಂಗವಾಗಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿಪಟುಗಳು ರೋಚಕವಾಗಿ ಸೆಣಸಾಡಿದರು
ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಅಂಗವಾಗಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿಪಟುಗಳು ರೋಚಕವಾಗಿ ಸೆಣಸಾಡಿದರು   

ಬೈಲಹೊಂಗಲ: ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಅಂಗವಾಗಿ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ನಡೆದ ಅಂತರರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗಳು ರೋಚಕವಾಗಿ ನಡೆದವು.

ಕುಸ್ತಿ ಕಣ ಹೂ ರಾಶಿಗಳಿಂದ, ಕುಸ್ತಿಪಟುಗಳ ಶಕ್ತಿ ಪ್ರದರ್ಶನದಿಂದ ರಂಗೇರಿತ್ತು. ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತ್ತಿದ್ದ ಅಪಾರ ಸಂಖ್ಯೆಯ ಕುಸ್ತಿಪ್ರೇಮಿಗಳು ಸೀಳ್ಳೆ, ಕೇಕೇ ಹಾಕಿ, ಅಭಿಮಾನದ ಚಪ್ಪಾಳೆ ತಟ್ಟಿ ಪೈಲ್ವಾನರನ್ನು ಹುರುದುಂಬಿಸಿದರು. ರುಮಾಲು ಸುತ್ತಿಕೊಂಡಿದ್ದ ಯುವಕರು, ಹಿರಿಯರು ಕುಸ್ತಿ ಕಣದ ಸುತ್ತ ಓಡಾಡಿ ಕುಸ್ತಿ ಯಶಸ್ವಿಗೊಳಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ್‌  ಎಚ್.ಎನ್.ಶಿರಹಟ್ಟಿ, ಗ್ರಾಮದ ಹಿರಿಯರು, ಅನೇಕರು ಕುಸ್ತಿಗಳನ್ನು ಹಿಡಿಸಿದರು.

ಪುರುಷ ವಿಭಾಗ: ಪುರುಷರ ಮೊದಲ ಜೋಡಿ ಕುಸ್ತಿಯಲ್ಲಿ ರೋಚಕವಾಗಿ ಸೆಣಸಾಡಿದ ಬ್ರೆಜಿಲ್ ದೇಶದ ಪ್ರಡೆಲ್ಲಾ ಲೀಮಾ ಕುಸ್ತಿಪಟು ಅವರು ಮಹಾರಾಷ್ಟ್ರ ಪುಣೆ ಪೈಲ್ವಾನ ಅಜಯ ಮಾಡಿದ ಏಕಲಂಗಿ ಡಾವ್ ಗೆ ಮಣಿದರು. ಈ ಮೂಲಕ ಬೆಳವಡಿ ಕೇಸರಿಯಾಗಿ ಅಜಯ ಅವರು ಹೊರಹೊಮ್ಮಿದರು.

ADVERTISEMENT

ಎರಡನೇ ಜೋಡಿಯಲ್ಲಿ ದೆಹಲಿ ವಿರೇಂದ್ರಸಿಂಗ್ ವಿರುದ್ಧ ಮಹಾರಾಷ್ಟ್ರ ಸತೀಶ ಮುಡೆ ಆಟಪಾಡಿ ನಿಖಾಲಿ ಡಾವ್ ಮಾಡಿ ಸೋಲಿಸಿದರು. ಮೂರನೇ ಜೋಡಿಯಲ್ಲಿ ದೆಹಲಿ ಕುಸ್ತಿಪಟು ಅಜಯಕುಮಾರ ಜೊತೆ ನಾಗರಾಜ ಬಸಿಡೋಣಿ ಗೆಲುವಿನ ಕೇಕೇ ಹಾಕಿದರು. ನಾಲ್ಕನೇ ಜೋಡಿಯಲ್ಲಿ ಕೊಲ್ಹಾಪುರ ಶ್ರೇಯಸ್ ವಿರುದ್ಧ ಹಳಿಯಾಳ ರೋಹನ್ ಗವಡೆ ವಿಜಯಶಾಲಿಯಾದರು.

ಮಹಿಳಾ ವಿಭಾಗ: ಮಹಿಳೆಯರ ವಿಭಾಗ ಮೊದಲ ಜೋಡಿ ಕುಸ್ತಿಯಲ್ಲಿ ಹಳಿಯಾಳ ಮಾಣಸಿ ಸಿದ್ದಿ ವಿರುದ್ಧ ಮಹಾರಾಷ್ಟ್ರದ ಸಚಿತಾ ಮೋರೆ ಗೆಲುವು ಸಾಧಿಸಿದರು. ಎರಡನೇ ಜೋಡಿಯಲ್ಲಿ ಮಹಾರಾಷ್ಟ್ರದ ದುರ್ಗಾ ನಾಯಕ ವಿರುದ್ಧ ಸ್ವಾತಿ ಪಾಟೀಲ ಕಡೋಲಿ ಗೆಲುವು ಸಾಧಿಸಿದರು. ಎಲ್ಲ ಪುರುಷರ, ಮಹಿಳಾ ಕುಸ್ತಿ ಪಂದ್ಯಾಟಗಳು ರೋಚಕವಾಗಿ ನಡೆದವು.

ಕುಸ್ತಿ ಪಂಚರಾಗಿ ಮಾಜಿ ಪೈಲ್ವಾನ ಅಶೋಕ ಮತ್ತಿಕೊಪ್ಪ, ಉಳವನಗೌಡ ಪಾಟೀಲ, ಮಂಜು ಗೋಕಾಕ, ಕುಮಾರ ಹೂಗಾರ, ವಿನೋದ ಬಳಿಗೇರ, ಪಾರುಖ್ ಸುತಗಟ್ಟಿ ಕಾರ್ಯನಿರ್ವಹಿಸಿದರು. ಅರುಣ ಘೋಡಗೇರಿ, ಮಹಾಂತೇಶ ತುರಮರಿ ನಿರೂಪಿಸಿದರು. ಕ್ರೀಡಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ತಹಶೀಲ್ದಾರ ಹೆಚ್.ಎನ್.ಶಿರಹಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಜಿಪಂ ಮಾಜಿ ಸದಸ್ಯ ಈರಣ್ಣ ಕರೀಖಟ್ಟಿ, ತಾಪಂ ಮಾಜಿ ಸದಸ್ಯ ರುದ್ರಯ್ಯ ರೊಟ್ಟಯ್ಯನವರ, ಜಿ.ಬಿ.ದೇಗಾವಿ, ವಿಶ್ವನಾಥ ಕರೀಕಟ್ಟಿ, ದೈಹಿಕ ಶಿಕ್ಷಕರಾದ ಶಂಕರ ಕರೀಕಟ್ಟಿ, ಗ್ರಾಮಸ್ತರು, ವಿವಿಧ ಇಲಾಖೆ ಅಧಿಕಾರಿಗಳು, ಪ್ರೇಕ್ಷಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.