ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಸರ್ಕಾರಿ ಪ್ರಾಥಮಿಕ ಶಾಲೆ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ರಾಜ್ಯ ಸರ್ಕಾರ ಈಚೆಗೆ 147 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಉನ್ನತೀಕರಿಸಿದೆ. ಇದರಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 36, ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 16 ಪ್ರೌಢಶಾಲೆ ಮಂಜೂರುಗೊಳಿಸಿ, ಬಂಪರ್ ಕೊಡುಗೆ ನೀಡಿದೆ. ಆದರೆ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಪಶ್ಚಿಮ ಭಾಗಕ್ಕೆ ಒಂದೂ ಪ್ರೌಢಶಾಲೆ ಮಂಜೂರಾಗದಿರುವುದು ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.
ಹಿಂಡಲಗಾ, ಸುಳಗಾ, ಕುದ್ರೇಮನಿ, ಕಲ್ಲೆಹೋಳ, ಬೆಕ್ಕಿನಕೇರಿ, ಮಣ್ಣೂರ, ಗೋಜಗೆ, ಬೆನಕನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಿವೆ. ಆದರೆ, ಪ್ರೌಢಶಾಲೆ ಇಲ್ಲದ್ದರಿಂದ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಕ್ಕಳು ಪ್ರೌಢಶಿಕ್ಷಣಕ್ಕಾಗಿ ಬೆಳಗಾವಿಗೆ ಬರುವಂತಾಗಿದೆ.
‘ಈ ಭಾಗದಲ್ಲಿ ಮರಾಠಿ ಮತದಾರರ ಓಲೈಕೆಗಾಗಿ ಕನ್ನಡ ಪ್ರೌಢಶಾಲೆ ಮಂಜೂರುಗೊಳಿಸಲು ಜನಪ್ರತಿನಿಧಿಗಳು ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಏಳನೇ ತರಗತಿಗೇ ವರ್ಗಾವಣೆ:
ಕನ್ನಡ ಪ್ರೌಢಶಾಲೆ ಇಲ್ಲದ್ದರಿಂದ ಈ ಭಾಗದ ಕನ್ನಡ ಪ್ರಾಥಮಿಕ ಶಾಲೆಗಳಲ್ಲೂ ದಾಖಲಾತಿ ಕುಸಿಯುತ್ತಿದೆ. ಮಣ್ಣೂರಿನ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 2024–25ನೇ ಸಾಲಿನಲ್ಲಿ 108 ವಿದ್ಯಾರ್ಥಿಗಳಿದ್ದರು. ಈ ಬಾರಿ ದಾಖಲಾತಿ 88ಕ್ಕೆ ಕುಸಿದಿದೆ.
‘ನಮ್ಮಲ್ಲಿ ಒಂದರಿಂದ ಎಂಟನೇ ತರಗತಿ ಇದೆ. ಕಳೆದ ವರ್ಷ ಏಳನೇ ತರಗತಿಯಲ್ಲಿ 18 ವಿದ್ಯಾರ್ಥಿಗಳಿದ್ದರು. ಈ ಪೈಕಿ ಐವರಷ್ಟೇ ಎಂಟನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಬೆಳಗಾವಿಯ ಕೆಲ ಪ್ರೌಢಶಾಲೆಗಳಲ್ಲಿ 9ನೇ ತರಗತಿಗೆ ಪ್ರವೇಶ ಸಿಗುವುದಿಲ್ಲ ಎಂದು ಕೆಲವರು ಏಳನೇ ತರಗತಿಗೇ ವರ್ಗಾವಣೆ ಪಡೆಯುತ್ತಿದ್ದಾರೆ’ ಎಂದು ಶಿಕ್ಷಕರು ಹೇಳುತ್ತಾರೆ.
‘ಹಿಂಡಲಗಾದಲ್ಲಿ 1962ರಿಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಇದ್ದು, 1ರಿಂದ 8ನೇ ತರಗತಿಯಲ್ಲಿ 197 ಮಕ್ಕಳಿದ್ದಾರೆ. ಕನ್ನಡ ಪ್ರೌಢಶಾಲೆ ಆರಂಭಕ್ಕೆ ಜಾಗದ ಕೊರತೆ ಎದುರಾಗಿದೆ. ಅದು ಸಾಕಾರವಾದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಪ್ರಾಥಮಿಕ ಶಾಲೆ ದಾಖಲಾತಿಯೂ ಹೆಚ್ಚುತ್ತದೆ’ ಎಂದು ಮುಖ್ಯಶಿಕ್ಷಕ ಶಿವಾನಂದ ಗಡ್ಲಿಂಗನವರ, ಶಿಕ್ಷಕ ವೀರೇಶ ಕರೆರುದ್ರನ್ನವರ ತಿಳಿಸಿದರು.
38 ಪ್ರೌಢಶಾಲೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಈ ಪೈಕಿ 16 ಮಂಜೂರಾಗಿವೆ. ಹಿಂಡಲಗಾ ಅಥವಾ ಮಣ್ಣೂರಿನಲ್ಲಿ ಕನ್ನಡ ಪ್ರೌಢಶಾಲೆ ಆರಂಭಕ್ಕೆ ಪ್ರಯತ್ನಿಸುತ್ತೇವೆಲೀಲಾವತಿ ಹಿರೇಮಠ ಡಿಡಿಪಿಐ ಬೆಳಗಾವಿ
ಎಂಟನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲೇ ಓದಿದ ಮಕ್ಕಳು ಪ್ರೌಢಶಿಕ್ಷಣವನ್ನಷ್ಟೇ ಬೆಳಗಾವಿಯಲ್ಲಿ ಪಡೆದು ಗ್ರಾಮೀಣ ಕೃಪಾಂಕದಿಂದ ವಂಚಿತರಾಗುತ್ತಿದ್ದಾರೆವೈ.ಜಿ.ಕೇಂದ್ರಿ ಪ್ರಭಾರ ಮುಖ್ಯಶಿಕ್ಷಕಿ ಮಣ್ಣೂರ
ನನ್ನ ಮಗನನ್ನು ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿಸಿದ್ದೆ. ಆದರೆ ಪ್ರೌಢಶಿಕ್ಷಣಕ್ಕಾಗಿ ಬೆಳಗಾವಿಗೆ ಹೋಗಲು ತೊಂದರೆಯಾಗುತ್ತದೆ ಎಂದು ಇದೇ ವರ್ಷ ಮರಾಠಿ ಶಾಲೆಗೆ ಸೇರಿಸಿದ್ದೇನೆರಘುನಾಥ ಬಿಜಗರ್ಣಿಕರ ಪಾಲಕ ಕುದ್ರೇಮನಿ
ಹಿಂಡಲಗಾದಲ್ಲಿ ತ್ವರಿತವಾಗಿ ಕನ್ನಡ ಪ್ರೌಢಶಾಲೆ ತೆರೆಯಬೇಕು. ಈ ಕೊರತೆ ಕಾರಣ ಮರಾಠಿಯತ್ತ ಮಕ್ಕಳು ವಾಲಬಾರದುಅಶೋಕ ಚಂದರಗಿ ಸದಸ್ಯ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.