ಖಾನಾಪುರ: ಬೆಳಗಾವಿ– ಪಣಜಿ ರಾಷ್ಟ್ರೀಯ ಹೆದ್ದಾರಿಯ ಮೂರನೇ ಹಂತದ ಕಾಮಗಾರಿ ಇನ್ನೂ ಕುಂಟುತ್ತ ಸಾಗಿದೆ. ಇದರಿಂದ ಕರ್ನಾಟಕ– ಗೋವಾ ಮಾರ್ಗದ ವಾಹನ ಸವಾರರು ಕಳೆದ ಐದು ವರ್ಷಗಳಿಂದಲೂ ಸಂಕಷ್ಟ ಎದುರಿಸುವಂತಾಗಿದೆ. ಇದೂವರೆಗೆ ಜನರ ಧ್ವನಿಗೆ ಸರ್ಕಾರಗಳು ಕಿವಿಗೊಟ್ಟಿಲ್ಲ.
ದ್ವಿಪಥ ಮಾರ್ಗವಾಗಿದ್ದ ಈ ಹೆದ್ದಾರಿಯನ್ನು 2018ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಗೊಳಿಸಲು ಉದ್ದೇಶಿಸಿತ್ತು. ಬಳಿಕ ಈ ಕಾಮಗಾರಿಗೆ ಅನುದಾನ ಮೀಸಲಿರಿಸಿ ಮೂರು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಹಸಿರುನಿಶಾನೆ ತೋರಿತ್ತು.
ಹೆದ್ದಾರಿ ಪ್ರಾಧಿಕಾರದ ಉದ್ದೇಶಿತ ಮೂರು ಹಂತದ ಕಾಮಗಾರಿಗಳ ಪೈಕಿ ಎರಡು ಹಂತಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮೂರನೇ ಹಂತದ ಕಾಮಗಾರಿ ಹಲವಾರು ಕಾರಣಗಳಿಂದ ಪೂರ್ಣಗೊಂಡಿಲ್ಲ. ಆರಂಭಗೊಂಡು 5 ವರ್ಷ ಪೂರ್ಣಗೊಂಡಿರುವ ಮೂರನೇ ಹಂತದ ಹೆದ್ದಾರಿ ಕಾಮಗಾರಿ ಇಂದಿಗೂ ಆಮೆಗತಿಯಲ್ಲಿ ಕುಂಟುತ್ತ, ತೆವಳುತ್ತ ಸಾಗಿದೆ.
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ದಕ್ಷಿಣ ಮಹಾರಾಷ್ಟ್ರ ಭಾಗವನ್ನು ನೆರೆಯ ಗೋವಾ ರಾಜ್ಯಕ್ಕೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ.
ಬೆಳಗಾವಿಯಿಂದ ಗೋವಾ ರಾಜ್ಯದ ಪಣಜಿ, ಮಡಗಾಂವ, ವಾಸ್ಕೋ ಶಹರಗಳಿಗೆ ತೆರಳಲು ಪ್ರಮುಖ ಮಾರ್ಗವೆಂದೇ ಗುರುತಿಸಲ್ಪಡುವ ಈ ಹೆದ್ದಾರಿಯಲ್ಲಿ ದಿನದ 24 ಗಂಟೆಯೂ ವಾಹನ ದಟ್ಟನೆ ಮಾಮೂಲು.
ಹೆದ್ದಾರಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣ ಈ ಮಾರ್ಗದ ಮೂಲಕ ಸಂಚರಿಸುವವರು ಹಾಗೂ ಈ ಮಾರ್ಗದ ಅಕ್ಕಪಕ್ಕದ ಗ್ರಾಮಗಳ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.
ಬೆಳಗಾವಿ– ಪಣಜಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಬೆಳಗಾವಿ– ಖಾನಾಪುರ, ಖಾನಾಪುರ– ಕರ್ನಾಟಕ ಗಡಿ ಮತ್ತು ಕರ್ನಾಟಕ– ಗೋವಾ ಗಡಿ– ಪಣಜಿ ಹೀಗೇ ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ.
ಖಾನಾಪುರ ಹೊರವಲಯದ ಹೊಣಕಲ್ ಕ್ರಾಸ್‌ನಿಂದ ಕರ್ನಾಟಕ– ಗೋವಾ ಗಡಿಯ ಅನಮೋಡವರೆಗಿನ 52.3 ಕಿ.ಮೀ ಅಂತರದ ಕಾಮಗಾರಿಯ ಪೈಕಿ 40 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ.
ಈಗಾಗಲೇ ಈ ಕಾಮಗಾರಿಗೆ ₹609 ಕೋಟಿ ಅನುದಾನ ವ್ಯಯಿಸಲಾಗಿದೆ. ಗುಂಜಿ ಗ್ರಾಮದ ಬಳಿ ಬೈಪಾಸ್ ಕಾಮಗಾರಿ, ಲೋಂಡಾ ಮತ್ತು ತಿನೈಘಾಟ ಬಳಿ ರೈಲ್ವೆ ಮಾರ್ಗದ ಮೇಲ್ಸೇತುವೆ ಕಾಮಗಾರಿ, ಲೋಂಡಾ– ರಾಮನಗರ ನಡುವಿನ ಪಾಂಡರಿ ನದಿಯ ಸೇತುವೆ ಕಾಮಗಾರಿ ಮತ್ತು ಈ ಮಾರ್ಗಮಧ್ಯದ ವಿವಿಧ ಜಲಮೂಲಗಳಿಗೆ ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವೆಡೆ ರಸ್ತೆ ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಈ ಮಾರ್ಗಗಳಲ್ಲಿ ತಾತ್ಕಾಲಿಕ ತಿರುವು ನಿರ್ಮಿಸಲಾಗಿದೆ.
ತಾತ್ಕಾಲಿಕ ತಿರುವು ರಸ್ತೆಗಳ ನಿರ್ವಹಣೆಯನ್ನು ಗುತ್ತಿಗೆದಾರರು ಸಮರ್ಪಕವಾಗಿ ಕೈಗೊಳ್ಳದ ಕಾರಣ ಖಾನಾಪುರದಿಂದ ಅನಮೋಡವರೆಗೆ 20ಕ್ಕೂ ಹೆಚ್ಚು ತಾತ್ಕಾಲಿಕ ತಿರುವುಗಳನ್ನು ದಾಟಿ ಮುಂದೆ ಸಾಗಲು ವಾಹನ ಸವಾರರು ಪರದಾಡುವಂತಾಗಿದೆ. ಮಳೆ ಬಂದಾಗ ತಾತ್ಕಾಲಿಕ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಈ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವಾಹನಗಳು ಸರಾಗವಾಗಿ ಸಾಗುವಂತೆ ಗಮನಹರಿಸಬೇಕು ಎಂಬುದು ಖಾನಾಪುರ– ಲೋಂಡಾ ಭಾಗದ ಸಾರ್ವಜನಿಕರ ಒಕ್ಕೂರಲ ಆಗ್ರಹ.
ಮಳೆಗಾಲ ಆರಂಭಗೊಂಡರೆ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಾರ್ಗಗಳು ಹಾಳಾಗಿ ವಾಹನಗಳು ಸಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಗುಂಜಿ– ಲೋಂಡಾ– ರಾಮನಗರ ಭಾಗದ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. 5 ವರ್ಷಗಳಿಂದ ಇದನ್ನೇ ಅನುಭವಿಸುತ್ತಿದ್ದೇವೆ. ಹದಗೆಟ್ಟ ರಸ್ತೆಯಲ್ಲಿ ಸಾಗುವುದರಿಂದ ಮುಕ್ತಿ ಎಂದು ಸಿಗುವುದೋ ಎಂದು ಕಾಯುವಂತಾಗಿದೆ.-ಬಾಬುರಾವ್ ದೇಸಾಯಿ ಲೋಂಡಾ ಗ್ರಾಮಸ್ಥ
ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿಕೊಡಬೇಕು ಎಂದು ಧಾರವಾಡದ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಈ ಸಮಸ್ಯೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೂ ತರಲಾಗಿದೆ.–ವಿಠ್ಠಲ ಹಲಗೇಕರ ಶಾಸಕ ಖಾನಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.