ADVERTISEMENT

ರಾಯಬಾಗ | ಬೈಕುಗಳ ಕರ್ಕಶ ಶಬ್ದ: ಜನರಿಗೆ ಕಿರಿಕಿರಿ

ರಾಯಬಾಗ ಪಟ್ಟಣದಲ್ಲಿ ಹೆಚ್ಚಿದ ಪುಂಡರ ಹಾವಳಿ, ಕ್ರಮ ಜರುಗಿಸದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 5:37 IST
Last Updated 16 ಜುಲೈ 2024, 5:37 IST
ಎಚ್.ಡಿ.ಮುಲ್ಲಾ
ಎಚ್.ಡಿ.ಮುಲ್ಲಾ   

ರಾಯಬಾಗ: ಕರ್ಕಶವಾಗಿ ಶಬ್ದ ಮಾಡುವ ಬೈಕುಗಳನ್ನು ಓಡಾಡಿಸಿ ಜನರಿಗೆ ತೊಂದರೆ ಕೊಡುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಯಬಾಗ ಪಟ್ಟಣ ಮಾತ್ರವಲ್ಲ; ಚಿಂಚಲಿ ರಸ್ತೆ, ಚಿಕ್ಕೋಡಿ ರಸ್ತೆ, ಸ್ಟೇಷನ್‌ ರಸ್ತೆಯಲ್ಲೂ ಯುವಕರು ದಿನವೂ ಈ ಸರ್ಕಸ್‌ ಮಾಡುವುದು ಸಾಮಾನ್ಯವಾಗಿದೆ.

ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ಬದಲಾವಣೆ ಅಥವಾ ಮಾರ್ಪಾಡು ಮಾಡಿಕೊಳ್ಳುವ ಯುವಕರು ಕರ್ಕಶ ಶಬ್ದ ಮಾಡುತ್ತ ಬೈಕ್‌ ಓಡಿಸುತ್ತಿದ್ದಾರೆ. ಇದು ಇತರ ವಾಹನ ಚಾಲಕರಿಗೆ ಮಾತ್ರವಲ್ಲ; ರಸ್ತೆ ಇಕ್ಕೆಲಗಳ ನಿವಾಸಿಗಳಿಗೂ ಸಾಕಷ್ಟು ಕಿರಿಕಿರಿ ಮಾಡುತ್ತಿದೆ. ಪಟ್ಟಣದ ರಸ್ತೆಗಳಲ್ಲೇ ಅತಿ ವೇಗವಾಗಿ ಬೈಕ್‌ ಓಡಿಸುತ್ತಿದ್ದಾರೆ. ಇದರಿಂದ ಅಪಾಯಗಳೂ ಸಂಭವಿಸುವುದು ಸಾಮಾನ್ಯವಾಗಿದೆ.

ಅತಿ ಹೆಚ್ಚು ‘ಹಾರ್ಸ್‌ಪವರ್‌’ ವಾಹನ ಸಾಗುತ್ತಿದೆ ಎಂಬುದು ಕಿಲೋಮೀಟರ್‌ ದೂರದಿಂದಲೇ ಕಿವಿಗೆ ಬೀಳುತ್ತದೆ. ಇದರಿಂದ ಚಿಕ್ಕ ಮಕ್ಕಳು, ಹಿರಿಯರು ಆತಂಕದಲ್ಲಿ ರಸ್ತೆಗೆ ಇಳಿಯುವಂತಾಗಿದೆ. ತಮ್ಮ ದೊಡ್ಡ ಬೆಲೆಯ ವಾಹನಗಳ ದರ್ಪ ತೋರಿಸಿಕೊಳ್ಳುವ ಭರದಲ್ಲಿ ಯುವಕರು ಜನರಿಗೆ ಸಂಕಷ್ಟ ತಂದೊಡ್ಡಿದ್ದಾರೆ.

ADVERTISEMENT

ಕೆಲವರಂತೂ ಶಾಲೆ, ಕಾಲೇಜುಗಳು ಬಿಟ್ಟ ನಂತರ ವಿದ್ಯಾರ್ಥಿನಿಯರ ಹಿಂದೆ ಕರ್ಕಶ ಶಬ್ದ ಮಾಡುತ್ತ ಹಿಂಬಾಲಿಸುವವರೂ ಇದ್ದಾರೆ. ಇದರಿಂದ ವಿದ್ಯಾರ್ಥಿನಿಯರು ಅಸಹಾಯಕರಾಗಿ ಹೆದರುವಂತಾಗಿದೆ.

ಕರ್ಕಶ ಶಬ್ದ ಮಾಡುವ ಹಾಗೂ ಮಾರ್ಪಾಡು ಮಾಡಲಾದ ಸೈಲೆನ್ಸರ್‌ಗಳನ್ನು ಕಿತ್ತು ರೂಲರ್‌ ಓಡಿಸಿ ನಾಶಪಡಿಸಬೇಕು ಎಂಬ ನಿಯಮವಿದೆ. ಯುವಜನರ ಈ ಮೊಂಡುತನ ಇದೂವರೆಗೆ ಪೊಲೀಸರ ಕಿವಿಗೆ ಬಿದ್ದಿಲ್ಲ. ಕೇಳಿಸಿದರೂ ಕೇಳದಂತೆ ಸುಮ್ಮನಾಗಿದ್ದಾರೆ ಎಂಬುದು ಜನರ ದೂರು.

‘ಜನರಿಗೆ ಕಿರಿಕಿರಿ ಉಂಟುಮಾಡುವ ಬೈಕ್‌ ಸವಾರರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುತ್ತೇವೆ.  ಗ್ಯಾರೇಜ್‌ ಮಾಲೀಕರಿಗೂ ಖಡಕ್‌ ಸೂಚನೆ ನೀಡುತ್ತೇವೆ’ ಎಂದು ಸಿಪಿಐ ಎಚ್.ಡಿ.ಮುಲ್ಲಾ ಪ್ರತಿಕ್ರಿಯಿಸುತ್ತಾರೆ.

ಸಂತೋಷ ನಾಯಿಕ
ಮಹೇಶ ತೇಲಿ

ಕರ್ಕಶ ಶಬ್ದ ಮಾಡುವ ವಾಹನಗಳ ಸಂಖ್ಯೆ ಪೊಲೀಸರಿಗೆ ನೀಡಿದರೆ ಸಾಕು; ಖುದ್ದಾಗಿ ಕ್ರಮ ವಹಿಸಲಾಗುವುದು. ನಿರಂತರ ಕಾರ್ಯಾಚರಣೆ ನಡೆಸಲಾಗುವುದು

-ಎಚ್.ಡಿ.ಮುಲ್ಲಾ ಸಿಪಿಐ

ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಕರ್ಕಶ ಶಬ್ದ ಮಾಡುವ ಬೈಕ್‌ ವಶಕ್ಕೆ ಪಡೆಯಬೇಕು. ತೊಂದರೆ ಮಾಡುವ ಸವಾರರ ಪರವಾನಗಿ ರದ್ದುಪಡಿಸಬೇಕು

- ಮಹೇಶ ತೇಲಿ ವಕೀಲ

ಪ್ರಮುಖ ರಸ್ತೆಗಳಲ್ಲಿ ಕಾಲೇಜಿನ ಬಳಿ ಬೀಟ್ ಪೊಲೀಸರನ್ನು ನಿಯೋಜನೆ ಮಾಡಬೇಕು. ಜನರಿಗೆ ತೊಂದರೆ ಕೊಡುವ ಬೈಕ್‌ ಸವಾರರಿಂದ ವಾಹನ ಕಿತ್ತುಕೊಳ್ಳಬೇಕು

-ಸಂತೋಷ ನಾಯಿಕ ಸ್ಥಳೀಯ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.