ADVERTISEMENT

ಜಿಲ್ಲಾ ಆಸ್ಪತ್ರೆಗೆ ರವಾನಿಸುವುದು ಅನಿವಾರ್ಯ

100 ಹಾಸಿಗೆಯುಳ್ಳ ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ

ರವಿ ಎಂ.ಹುಲಕುಂದ
Published 31 ಮಾರ್ಚ್ 2020, 19:30 IST
Last Updated 31 ಮಾರ್ಚ್ 2020, 19:30 IST
ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ
ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ   

‌ಬೈಲಹೊಂಗಲ: ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯಗಳು ದೊರೆತರೆ ಬಡ ರೋಗಿಗಳು ನಿಟ್ಟುಸಿರು ಬಿಟ್ಟು ಆರೋಗ್ಯವಾಗಿ ಮನೆಗೆ ವಾಪಸಾಗುತ್ತಾರೆ. ಇಲ್ಲವಾದರೆ ಅಪಾಯಕ್ಕೆ ತುತ್ತಾಗಬೇಕಾಗುತ್ತದೆ. ಅದೀಗ ಉಪವಿಭಾಗದ ಕೇಂದ್ರ ಸ್ಥಾನವಾದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಂಡುಬರುತ್ತಿದೆ. ಆಸ್ಪತ್ರೆ ಸುಸಜ್ಜಿತವಾಗಿದೆ. ಆದರೆ ಗಂಭೀರ ಚಿಕಿತ್ಸೆಗಳಿಗೆ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಬೇಕಾದ ಸ್ಥಿತಿ ಇದೆ.

100 ಹಾಸಿಗೆ ಸಾಮರ್ಥ್ಯವುಳ್ಳಸಾರ್ವಜನಿಕ ಆಸ್ಪತ್ರೆ ತಾಲ್ಲೂಕಿನ ದೊಡ್ಡಾಸ್ಪತ್ರೆಯಾಗಿದೆ. 60ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣದಿಂದ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರು ಚಿಕಿತ್ಸೆಗೆ ದಾಖಲಾಗುತ್ತಾರೆ. ನಿತ್ಯವೂ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ರೋಗಿಗಳು ಕಂಡು ಬರುತ್ತಾರೆ. ಈಗಿನ, ಹಿಂದಿನ ಶಾಸಕರ ಪ್ರಯತ್ನದಿಂದಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಇಲ್ಲಿ ಕೊರೊನಾ ವೈರಾಣು ಸೋಂಕಿತರಿಗೆ ಚಿಕಿತ್ಸೆ ನೀಡಲು ತಕ್ಕಮಟ್ಟಿನ ಸೌಲಭ್ಯವಷ್ಟೆ ಇದೆ. ಈ ಪರಿಣಾಮ, ಜಿಲ್ಲಾಸ್ಪತ್ರೆಯ ಮೇಲಿನ ಅವಲಂಬನೆ ಹೆಚ್ಚಾಗಿದೆ.

ADVERTISEMENT

ಈ ಆಸ್ಪತ್ರೆಯಲ್ಲಿ 38 ವೈದ್ಯರು, 85 ನರ್ಸ್‌ಗಳಿದ್ದಾರೆ. ಇವರೊಂದಿಗೆ ಔಷಧ ವಿತರಕರು 16 ಸೇರಿ 40 ಸಿಬ್ಬಂದಿ ಇದ್ದಾರೆ. ನೆಗಡಿ, ಜ್ವರ, ಕೆಮ್ಮ, ಹೆರಿಗೆ, ರಕ್ತದೊತ್ತಡ, ಹಲ್ಲು, ನೇತ್ರ ತಪಾಸಣೆ, ಮಧುಮೇಹ, ಅಪಘಾತದಲ್ಲಿ ಸಣ್ಣ, ಪುಟ್ಟ ಗಾಯಗಳಿಗೆ ಚಿಕಿತ್ಸೆ ದೊರೆಯುತ್ತದೆ. ಆಯುಷ್ಮಾನ್‌ ಯೋಜನೆಯಡಿ ಆಸ್ಪತ್ರೆಗೆ ಪ್ರಥಮ ಸ್ಥಾನ ದೊರೆತಿದೆ. ಸದ್ಯ 6 ಅಂಬ್ಯುಲೆನ್ಸ್‌ಗಳಿವೆ. ಐಸಿಯು, ಡಯಾಲಿಸಿಸ್‌ ಸೌಲಭ್ಯವಿದೆ. ಕಿಡ್ನಿಗೆ ಸಂಬಂಧಿಸಿದಂತೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡಯಾಲಿಸಿಸ್‌ ಘಟಕ, ಡಿಜಿಟಲ್ ಎಕ್ಸರೇ ಘಟಕ, 3 ಹಾಸಿಗೆಯುಳ್ಳ ಐಸಿಯು ಘಟಕ ತೆರೆಯಲಾಗಿದೆ. ‘ಗಂಭೀರ ಗಾಯ, ನೇತ್ರ ಶಸ್ತ್ರಚಿಕಿತ್ಸೆ, ಹಾವು ಕಡಿತ ಸೇರಿದಂತೆ ಹಲವು ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ’ ಎಂದು ಸಾರ್ವಜನಿಕರು ದೂರುತ್ತಾರೆ.

ತಾಲ್ಲೂಕಿನಲ್ಲಿ 13 ಪ್ರಾಥಮಿಕ ಆರೋಗ್ಯ ಕೇಂದ್ರ, 3 ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

‘ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 20 ಜನ ವಿದೇಶಗಳಿಂದ ಬಂದಿದ್ದಾರೆ. ಹೊರ ರಾಜ್ಯ, ಜಿಲ್ಲೆಗಳಿಂದ 2500 ಜನ ಬಂದಿದ್ದಾರೆ. ಇವರೆಲ್ಲರನ್ನೂ ಪ್ರಥಮ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈವರೆಗೆ ಯಾರಲ್ಲೂ ಕೊರೊನಾ ವೈರಸ್ ಸೋಂಕು ಕಂಡು ಬಂದಿಲ್ಲ. ಪಟ್ಟಣದ ಹೊರ ವಲಯದಲ್ಲಿರುವ ವಸತಿ ಶಾಲೆಯಲ್ಲಿ 16 ಕೊಠಡಿಗಳಿವೆ. ಇಬ್ಬರು ಮಾತ್ರ ಐಸೊಲೇಷನ್‌ನಲ್ಲಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್. ಸಿದ್ದನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.