ADVERTISEMENT

ಪದಾಧಿಕಾರಿಗಳ ಸಭೆಗೆ ಉಸ್ತುವಾರಿಗೆ ಆಹ್ವಾನ

ನಳಿನ್‌ಕುಮಾರ್‌ ಕಟೀಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 16:17 IST
Last Updated 16 ಡಿಸೆಂಬರ್ 2020, 16:17 IST
ನಳಿನ್‌ಕುಮಾರ್ ಕಟೀಲ್
ನಳಿನ್‌ಕುಮಾರ್ ಕಟೀಲ್   

ಬೆಳಗಾವಿ: ‘ಡಿ. 20ರಂದು ಬೆಂಗಳೂರಿನಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಯಲಿದ್ದು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ಅವರಿಗೂ ಆಹ್ವಾನ ನೀಡಲಾಗಿದೆ. ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಮತ್ತು ಕೇಂದ್ರದ ನಾಯಕರು ಚರ್ಚಿಸುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸುವುದು ನಮ್ಮಲ್ಲಿರುವ ವ್ಯವಸ್ಥೆ. ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರ್ಣಯ ತೆಗೆದುಕೊಳ್ಳಲಿದ್ದಾರೆ’ ಎಂದರು.

‘ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ವಾಗ್ದಾಳಿ ನಡೆಸತ್ತಲೇ ಇರುತ್ತಾರೆ. ನನ್ನ ಮೇಲೆ ಅವರಿಗೆ ತುಂಬಾ ಪ್ರೀತಿ ಇರಬೇಕು’ ಎಂದು ವ್ಯಂಗ್ಯವಾಗಿ ಹೇಳಿದರು.

ADVERTISEMENT

ವಿಧಾನ ಪರಿಷತ್‌ನಲ್ಲಿ ಗಲಾಟೆಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಮತ್ತು ಸರ್ಕಾರ ಕಾನೂನು ಹೋರಾಟಕ್ಕೆ ಪ್ರಯತ್ನಿಸಿದೆ. ಅಧಿಕಾರ ಕಳೆದುಕೊಂಡಿರುವುದಕ್ಕೆ ಕಾಂಗ್ರೆಸ್‌ನವರು ಗೂಂಡಾಗಿರಿ ಮಾಡುತ್ತಿದ್ದಾರೆ. ಇದಕ್ಕೆ ಬಹಳಷ್ಟು ನಿದರ್ಶನಗಳಿವೆ’ ಎಂದು ಟೀಕಿಸಿದರು.

‘17 ಶಾಸಕರು ಬಿಜೆಪಿಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಸುಧಾಕರ್ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿಯನ್ನು ವಿಧಾನಸಭೆಗೆ ತಂದಿದ್ದರು. ಉಪಸಭಾಪತಿ ಎಳೆದು ಹೊರ ಹಾಕುವ ಮೂಲಕ ಗೂಂಡಾಗಿರಿಯನ್ನು ವಿಧಾನಪರಿಷತ್ ಒಳಕ್ಕೂ ತಂದಿದ್ದಾರೆ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಅವಿಶ್ವಾಸ ಮಂಡನೆ ಬಳಿಕ ಸಭಾಪತಿ ಸ್ಥಾನದಲ್ಲಿ ಕೂರಬಾರದು. ಹಾಗೇನಾದರೂ ಇದ್ದರೆ ಕಾನೂನು ಹೋರಾಟ ಮಾಡಬೇಕಿತ್ತು’ ಎಂದರು.

‘ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅಧಿಕಾರ ಇದ್ದಾಗ ಭ್ರಷ್ಟಾಚಾರ ಮಾಡುವುದು; ಇಲ್ಲದಿದ್ದಾಗ ಬೆಂಕಿ ಹಾಕಿ, ಗಲಭೆ ಸೃಷ್ಟಿಸಿರುವ ಹತ್ತಾರು ಉದಾಹರಣೆಗಳಿವೆ. ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಹಲವು ಗಲಭೆ ಸೃಷ್ಟಿಸಲು ಕಾಂಗ್ರೆಸ್ನವರು ಯತ್ನಿಸಿದ್ದರು. ಆದರೆ, ಯಶಸ್ವಿಯಾಗಿಲ್ಲ. ಕಾಂಗ್ರೆಸ್‌ನ ಹೋರಾಟಕ್ಕೆ ಜನ ಬೆಂಬಲ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.