ADVERTISEMENT

ಮುಖ್ಯಮಂತ್ರಿಯ ಪರಮಾಧಿಕಾರ ನಾವ್ಯಾರೂ ಪ್ರಶ್ನಿಸುವಂತಿಲ್ಲ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 10:05 IST
Last Updated 2 ಏಪ್ರಿಲ್ 2021, 10:05 IST
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ    

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿರುವುದಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗೆ ಇರುವ ಪರಮಾಧಿಕಾರವನ್ನು ನಾವ್ಯಾರೂ ಪ್ರಶ್ನಿಸುವುದು ಸಾಧುವೂ ಅಲ್ಲ, ಸೌಜನ್ಯವೂ ಅಲ್ಲ. ಸಚಿವ ಸಂಪುಟದ ಸದಸ್ಯರು, ಶಾಸಕರು, ಸಂಸದರು ಅಥವಾ ಇತರ ಚುನಾಯಿತ ಪ್ರತಿನಿಧಿಗಳು ಮುಖ್ಯಮಂತ್ರಿ ಪರಮಾಧಿಕಾರ ಪ್ರಶ್ನಿಸುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ನಿರ್ದೇಶನದಂತೆ ಒಮ್ಮತದಿಂದ ಸಚಿವ ಸಂಪುಟ ಕೆಲಸ ಮಾಡುತ್ತಿದೆ. 33 ಇಲಾಖೆಗಳಿಗೂ ಮುಖ್ಯಮಂತ್ರಿ ಬಜೆಟ್‌ನಲ್ಲಿ ಅನುದಾನ ಹಂಚಿರುತ್ತಾರೆ. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಬೇಡಿಕೆ ಇರುವಷ್ಟು ಅನುದಾನ ಕೊಡಲಾಗುವುದಿಲ್ಲ. ಹೆಚ್ಚಿಗೆ ಬೇಕಾದರೆ ನೀವೇ ಮುಖ್ಯಮಂತ್ರಿ ಭೇಟಿಯಾಗಿ ಕೇಳಿಕೊಳ್ಳಿ ಎಂದು ನಮ್ಮ ಬಳಿ ಬರುವ ಶಾಸಕರು ಅಥವಾ ಸಂಸದರಿಗೆ ನಾವೇ ಹೇಳುತ್ತೇವೆ. ಇದು ಈ ಸರ್ಕಾರದಲ್ಲಷ್ಟೆ ಅಲ್ಲ. ಹಿಂದಿನಿಂದಲೂ ನಡೆದು ಬಂದಿದೆ. ಶಾಸಕರ ಬೇಕು–ಬೇಡಗಳನ್ನು ನೋಡಿ ಮುಖ್ಯಮಂತ್ರಿ ನಿರ್ಧರಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಸಮಸ್ಯೆಗಳೇನೇ ಇದ್ದರೂ ಸಂಪುಟ ಸಭೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಮುಸುಕಿನ ಗುದ್ದಾಟವೇನಿಲ್ಲ. ಈಶ್ವರಪ್ಪ ಅವರು ಯಾವ ವಿಚಾರ ಇಟ್ಟುಕೊಂಡು ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಸಚಿವರು ಮುಖ್ಯಮಂತ್ರಿ ನಿರ್ದೇಶನದಂತೆ ಕೆಲಸ ಮಾಡಬೇಕು’ ಎಂದರು.

‘ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದರಿಂದ ಕಾಂಗ್ರೆಸ್‌ನವರು ಏನನ್ನೂ ಸಾಧಿಸಲಾಗದು’ ಎಂದು ಪ್ರತಿಕ್ರಿಯಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.