ADVERTISEMENT

ಬೆಳಗಾವಿ ಕಾಂಗ್ರೆಸ್‌ ಸಮಾವೇಶದಲ್ಲಿ ಗಲಾಟೆ: ಇಬ್ಬರು ಕಾನ್‌ಸ್ಟೆಬಲ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 22:01 IST
Last Updated 29 ಏಪ್ರಿಲ್ 2025, 22:01 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಳಗಾವಿ: ನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರ ಗದ್ದಲ ತಡೆಯಲು ವಿಫಲರಾದ ಕಾರಣ ನೀಡಿ, ನಗರದ ಖಡೇಬಜಾರ್ ಠಾಣೆಯ ಕಾನ್‌ಸ್ಟೆಬಲ್ ಬಿ.ಎ. ನೌಕುಡಿ ಮತ್ತು ಕ್ಯಾಂಪ್ ಠಾಣೆಯ ಕಾನ್‌ಸ್ಟೆಬಲ್ ಮಲ್ಲಪ್ಪ ಹಡಗಿನಾಳ ಅವರನ್ನು ಅಮಾನತುಗೊಳಿಸಿ ಉತ್ತರ ವಲಯ ಐಜಿಪಿ ಚೇತನಸಿಂಗ್‌ ರಾಥೋಡ್‌ ಆದೇಶ ಹೊರಡಿಸಿದ್ದಾರೆ.

‘ಇಡೀ ಸಮಾವೇಶದ ಆಗು–ಹೋಗು ಗಳ ಮೇಲೆ ನಿಗಾ ಇಡಲು ಇಬ್ಬರಿಗೂ ಜವಾಬ್ದಾರಿ ವಹಿಸಲಾಗಿತ್ತು. ಕಪ್ಪು ಬಾವುಟ ಪತ್ತೆ ಮಾಡುವಲ್ಲಿ, ಗಲಾಟೆಯ ವಿಷಯ ಮೇಲಧಿಕಾರಿಗಳಿಗೆ ತಿಳಿಸುವಲ್ಲಿ ಲೋಪ ಎಸಗಿದ್ದಾರೆ. ಜವಾಬ್ದಾರಿ ಸರಿಯಾಗಿ ನಿರ್ವಹಿಸದ ಕಾರಣ ಅಮಾನತು ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಮಾವೇಶದ ಸ್ಥಳಕ್ಕೆ ನುಗ್ಗಿದ ಬಿಜೆಪಿಯ ಆರು ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಸಿ.ಎಂ ವಿರುದ್ಧ ಘೋಷಣೆ ಕೂಗಿದ್ದರು. ಈ ಎಲ್ಲದರ ಮಧ್ಯೆ ಭದ್ರತಾ ವೈಫಲ್ಯ ಬಗ್ಗೆ ಸಿಟ್ಟಿಗೆದ್ದು ಮುಖ್ಯಮಂತ್ರಿ ಅವರು ಎಎಸ್ಪಿ ನಾರಾಯಣ ಭರಮಣಿ ಅವರ ಮೇಲೆ ಕೈ ಎತ್ತಲು ಮುಂದಾಗಿದ್ದರು.

ADVERTISEMENT

‘ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳ ಲೋಪವೂ ಕಂಡುಬಂದಿದೆ. ಅವರನ್ನು ಬಿಟ್ಟು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಸಿ.ಎಂ ತರಾಟೆ: ಸಮಾವೇಶದ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿ.ಎಂ. ಸಿದ್ದರಾಮಯ್ಯ ಎಲ್ಲ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಲೋಪದ ಬಗ್ಗೆ ತೀವ್ರ ತರಾಟೆ ತೆಗೆದುಕೊಂಡು ಶಿಸ್ತಿನ ಕ್ರಮ ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.