ADVERTISEMENT

ಗಳಲೆ ರೋಗದಿಂದ ಕೃಷ್ಣಮೃಗಗಳ ಸಾವು: ಪಕ್ಕದ ಗ್ರಾಮಗಳಲ್ಲಿ ಮುಂಜಾಗೃತೆಗೆ ಸಲಹೆ

ಗಳಲೆ ರೋಗದಿಂದ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು: ಡಿಸಿಎಫ್‌ ಎನ್‌.ಇ.ಕ್ರಾಂತಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:20 IST
Last Updated 20 ನವೆಂಬರ್ 2025, 2:20 IST
ಎನ್‌.ಇ.ಕ್ರಾಂತಿ
ಎನ್‌.ಇ.ಕ್ರಾಂತಿ   

ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ (ಇಂಡೀಡ್‌ ಹೆಮರೈಜಿಕ್‌ ಸೆಪ್ಟೀಸಿಮಿಯಾ) ಕಾರಣವಾಗಿದೆ. ಈ ಸೋಂಕು ಗಾಳಿಯಲ್ಲಿ ಮತ್ತು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುವ ಸಾಧ್ಯತೆ ಇದೆ. ಮೃಗಾಲಯದ ಸುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ನಿಗಾ ವಹಿಸುವಂತೆ ಮುನ್ಸೂಚನೆ ನೀಡಲಾಗಿದೆ’ ಎಂದು ಡಿಸಿಎಫ್‌ ಎನ್‌.ಇ.ಕ್ರಾಂತಿ ಹೇಳಿದರು.

ಇಲ್ಲಿನ ಅರಣ್ಯ ಇಲಾಖೆಯ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದ್ಯ ಮೃಗಾಯದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ. ಬದುಕುಳಿದ ಏಳೂ ಕೃಷ್ಣಮೃಗಗಳು ಲವಲವಿಕೆಯಿಂದ ಓಡಾಡಿಕೊಂಡಿವೆ. ಅಕ್ಕಪಕ್ಕದ ಪ್ರಾಣಿಗಳಿಗೆ ಸೋಂಕು ತಗಲದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೃಷ್ಣಮೃಗಗಳ ವಿಭಾಗ ಬಿಟ್ಟು, ಉಳಿದ ಕಡೆ ಪ್ರವಾಸಿಗರು ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟೈಸ್‌ ಮಾಡಲಾಗುತ್ತಿದೆ’ ಎಂದರು.

‘ಹೆಮರೈಜಿಕ್‌ ಸೆಪ್ಟೀಸಿಮಿಯಾ ಬ್ಯಾಕ್ಟೀರಿಯಾ ಪ್ರಾಣಿಗಳ ದೇಹದಲ್ಲಿ ಇರುತ್ತವೆ. ರೋಗ ನಿಯಂತ್ರಣ ಶಕ್ತಿ ಕಡಿಮೆ ಆದಾಗ ಅವು ಕ್ರಿಯಾಶೀಲವಾಗುತ್ತವೆ. ಬೆಳಗಾವಿಯಲ್ಲಿ ಉಂಟಾದ ವಾತಾವರಣದ ದಿಢೀರ್‌ ಬದಲಾವಣೆಯಿಂದ ಇವು ಹುಟ್ಟಿಕೊಂಡಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಈ ರೋಗ ಬಂದ ಯಾವುದೇ ಪ್ರಾಣಿಗೆ ಮೇಲೆ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ದೇಹದ ಒಳಗೆಡೆ ಹೃದಯ, ಕಿಡ್ನಿ, ಪುಪ್ಪುಸ, ಕರುಳು ಹೀಗೆ ಎಲ್ಲೆಂದರಲ್ಲಿ ರಕ್ತಸ್ರಾವ ಆಗುತ್ತದೆ. ಸೋಂಕು ತಗಲಿದ ಆರೇ ತಾಸಿನಲ್ಲಿ ಅದು ದೇಹದಲ್ಲಿ ವ್ಯಾಪಿಸಿಕೊಳ್ಳುತ್ತದೆ. 24 ತಾಸಿನಲ್ಲಿ ಪ್ರಾಣಿ ಸಾಯುತ್ತದೆ. ಈ ಹಿಂದೆ ಗುಜರಾತ್‌ನ ವಡೋದರಾದಲ್ಲಿ ಇದೇ ಸೋಂಕು ಕಾಣಿಸಿಕೊಂಡಿತ್ತು. ಅಲ್ಲಿನ ವೈದ್ಯರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂಪರ್ಕಿಸಿದ್ದೇವೆ. ಅವರ ಸಲಹೆಯ ಮೇರೆಗೆ ಚಿಕಿತ್ಸೆ ಕೊಡುತ್ತಿದ್ದೇವೆ’ ಎಂದೂ ಅವರು ಹೇಳಿದರು.

ಎಸಿಎಫ್‌ ನಾಗರಾಜ ಬಾಳೇಹೊಸೂರ ಹಾಗೂ ಇತರ ಅಧಿಕಾರಿಗಳು ಇದ್ದರು.

‘ಲಸಿಕೆ ಹಾಕುವುದು ಕಷ್ಟ’

‘ಕೃಷ್ಣಮೃಗಗಳು ಅತ್ಯಂತ ಸೂಕ್ಷ್ಮ ಜೀವಿಗಳು. ತುಸು ಗದರಿಸಿದರೂ ಹೃದಯಾಘಾತದಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ ಮುಂಚಿತವಾಗಿಯೇ ಅವುಗಳನ್ನು ಹಿಡಿದು ರೋಗತಡೆ ಲಸಿಕೆ ಹಾಕುವುದು ಕಷ್ಟ’ ಎಂದು ಎನ್‌.ಸಿ. ಕ್ರಾಂತಿ ಹೇಳಿದರು. ‘ನ್ಯಾಡ್ರೆಸ್‌’ ಸಂಸ್ಥೆಯು ಸೆಪ್ಟೆಂಬರ್‌ನಲ್ಲಿಯೇ ಮುನ್ಸೂಚನೆ ನೀಡಿತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಇಂಥ ಯಾವುದೇ ಸೂಚನೆ ನಮಗೆ ಬಂದಿಲ್ಲ. ಪಶುಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಅವರಿಗೂ ಮಾಹಿತಿ ಇಲ್ಲ. ‘ನಿವೇದಿ’ ಎಂಬ ವೆಬ್‌ಸೈಟಿನಲ್ಲಿ ‘2026ರ ಜನವರಿಯಲ್ಲಿ ಹರಡಬಹುದು’ ಎಂಬ ಮಾಹಿತಿ ಇದೆ. ಅದನ್ನು ಬಿಟ್ಟರೆ ಯಾರೂ ಅಂದಾಜಿಸಲು ಆಗಿಲ್ಲ’ ಎಂದರು.

‘ಮೃಗಾಲಯ ಸಿಬ್ಬಂದಿ ಲೋಪ ಇಲ್ಲ’

ಕೃಷ್ಣಮೃಗಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿವೆ. ಇದರಲ್ಲಿ ಮೃಗಾಲಯದ ಸಿಬ್ಬಂದಿಯ ಯಾವುದೇ ಲೋಪ ಕಂಡುಬಂದಿಲ್ಲ. ಅಲ್ಲಿರುವ ಸಿಬ್ಬಂದಿ ಹಾಗೂ ವೈದ್ಯರು ಇವುಗಳನ್ನು ಬದುಕಿಸುವ ಯತ್ನ ಮಾಡಿದ್ದಾರೆ’ ಎಂದು ಕ್ರಾಂತಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ನ.13ರಂದು ಎಂಟು ಕೃಷ್ಣಮೃಗಗಳು ಸತ್ತಾಗಲೇ ನಾವು ‘ಅಲರ್ಟ್‌’ ಆಗಿದ್ದೇವೆ. ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿದ್ದೇವೆ. ತಜ್ಞರ ಕರೆಯಿಸಿ ಚಿಕಿತ್ಸೆ ಕೊಡಿಸಿದ್ದೇವೆ. ವಿಳಂಬ ಮಾಡಿಲ್ಲ’ ಎಂದರು. ‘ಮೃಗಾಲಯದ ಆರೋಗ್ಯ ಸಲಹಾ ಸಮಿತಿ’ ಏನು ಕೆಲಸ ಮಾಡಿದೆ? ಇದಕ್ಕೆ ಹೊಣೆ ಯಾರು?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಸಮಿತಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.