ADVERTISEMENT

ಬೆಳಗಾವಿ: ರಾಣಿ ಚನ್ನಮ್ಮ ಕಿರು ಮೃಗಾಲಯದ 28 ಕೃಷ್ಣಮೃಗ ಸಾವು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 7:38 IST
Last Updated 15 ನವೆಂಬರ್ 2025, 7:38 IST
   

ಬೆಳಗಾವಿ: ಸಮೀಪದ ಭೂತರಾಮನ ಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಮೃತಪಟ್ಟಿವೆ. ಗುರುವಾರ 8 ಮೃತಪಟ್ಟಿದ್ದರೆ, 20 ಕೃಷ್ಣಮೃಗಗಳು ಶನಿವಾರ ಬೆಳಗಿನ ಜಾವ ಮೃತಪಟ್ಟಿವೆ.

ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಗಳಿದ್ದವು. ಗದಗ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯ ಸೇರಿ ವಿವಿಧ ಕಡೆಗಳಿಂದ ಅವುಗಳನ್ನು ತರಲಾಗಿತ್ತು. ಅವು ನಾಲ್ಕರಿಂದ ಆರು ವರ್ಷ ವಯಸ್ಸಿನವು. ಸದ್ಯ, 10 ಕೃಷ್ಣಮೃಗಗಳಿವೆ. ಒಂದರ ಹಿಂದೊಂದು ನಿತ್ರಾಣಗೊಂಡು, ಅವು ದಯನೀಯ ಸ್ಥಿತಿಯಲ್ಲಿ ಕುಸಿದು ಬೀಳುತ್ತಿರುವುದು ಮನಕಲಕುವಂತಿತ್ತು.

‘ಸಾವಿಗೆ ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿರಬಹುದು. ಗುರುವಾರ ಸಾವನ್ನಪ್ಪಿದ್ದ ಎಂಟು ಕೃಷ್ಣಮೃಗಗಳ ಒಳ ಅಂಗಾಂಗಗಳ ಮಾದರಿಗಳನ್ನು ಪರೀಕ್ಷೆಗಾಗಿ ಬನ್ನೇರುಘಟ್ಟ ಮತ್ತು ಮೈಸೂರಿಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ’ ಎಂದು ಬೆಳಗಾವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸೂರ ಹೇಳಿದರು.

ADVERTISEMENT

‘ರಾಜ್ಯದ ಯಾವುದೇ ಮೃಗಾಲಯದಲ್ಲಿ ಇಂಥ ಪ್ರಕರಣ ಕಂಡುಬಂದಿಲ್ಲ. ನಮ್ಮಲ್ಲೂ ಇದೇ ಮೊದಲ ಬಾರಿ ಇಂಥ ಪ್ರಕರಣ ವರದಿ ಆಗಿದೆ. ಸೋಂಕು ತಡೆಗೆ ಇತರೆ ಪ್ರಾಣಿಗಳನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಕೃಷ್ಣಮೃಗಗಳು ಇರುವ ಆವರಣವನ್ನು ಮುಚ್ಚಲಾಗಿದೆ. ಅಲ್ಲದೇ, ಕಿರು ಮೃಗಾಲಯದ ಪರಿಸರದಲ್ಲಿ ಸೋಂಕು ನಿವಾರಕ ಸಿಂಪಡಿಸಿದ್ದೇವೆ’ ಎಂದರು.

‘ಮೃಗಾಲಯದ ಬೇರೆ ಪ್ರಾಣಿಗಳ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿಲ್ಲ. ಆದರೂ, ಮುನ್ನೆಚ್ಚರಿಕೆ ದೃಷ್ಟಿಯಿಂದ ಎಲ್ಲ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡುತ್ತೇವೆ’ ಎಂದರು.

‘ಕರ್ನಾಟಕ ಮೃಗಾಲಯ ಪ್ರಾಧಿಕಾರ ನೇಮಿಸಿದ ಪಶುವೈದ್ಯರು ಮೃಗಾಲಯದಲ್ಲಿನ ಎಲ್ಲ ಪ್ರಾಣಿಗಳ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸುತ್ತಿಲ್ಲ’ ಎಂಬ ಆರೋಪಕ್ಕೆ ಉತ್ತರಿಸಲು ಅವರು ನಿರಾಕರಿಸಿದರು.

ತನಿಖೆಗೆ ಆದೇಶ

ಕೃಷ್ಣಮೃಗಗಳ ಸಾವಿನ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

‘ಪ್ರಾಥಮಿಕ ಮಾಹಿತಿ ಪ್ರಕಾರ, ಕೃಷ್ಣಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ವರದಿ ಇದೆ.ಈ ಸೋಂಕು ಇತರ ಪ್ರಾಣಿಗಳಿಗೆ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೃಷ್ಣಮೃಗಗಳು ಕಲುಷಿತ ನೀರು ಅಥವಾ ಆಹಾರ ಸೇವಿಸಿ ಸಾವನ್ನಪ್ಪಿವೆಯೇ ಅಥವಾ ಬೆಕ್ಕುಗಳು ಮತ್ತು ಇತರೆ ಸಾಕು ಪ್ರಾಣಿಗಳಿಂದ ಕಾಯಿಲೆ ಹರಡಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಮಿತಿ ರಚಿಸಿ, ತನಿಖೆ ನಡೆಸಬೇಕು’ ಎಂದು ಹೇಳಿದ್ದಾರೆ.

‘ಪ್ರಾಣಿಗಳ ಸಾವು ಕಳವಳಕಾರಿ ವಿಷಯ. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು. ಸಿಬ್ಬಂದಿ ನಿರ್ಲಕ್ಷ್ಯ ಗಮನಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.