ADVERTISEMENT

ಕೃಷ್ಣಮೃಗಗಳ ಸಾವು | ಲೋಪ ದೃಢಪಟ್ಟರೆ ಸಿಬ್ಬಂದಿ ವಿರುದ್ಧ ಕ್ರಮ: ರಂಗಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 11:05 IST
Last Updated 17 ನವೆಂಬರ್ 2025, 11:05 IST
   

ಬೆಳಗಾವಿ: ‘ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿನ ಪ್ರಕರಣದಲ್ಲಿ ವೈದ್ಯರು ಮತ್ತು ಸಿಬ್ಬಂದ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಾಣಿಗಳ ಒಳಾಂಗಗಳ ಪರೀಕ್ಷೆ ವರದಿ ಮತ್ತು ತನಿಖಾ ವರದಿಗೆ ಕಾಯುತ್ತಿದ್ದೇವೆ. ಸಿಬ್ಬಂದಿ ಲೋಪವೆಸಗಿರುವುದು ದೃಢಪಟ್ಟರೆ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ ಹೇಳಿದರು.

ಕಿರು ಮೃಗಾಲಯಕ್ಕೆ ಸೋಮವಾರ ಭೇಟಿ ನೀಡಿ, ಪ್ರಕರಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅಳಿವಿನಂಚಿನಲ್ಲಿ ಇರುವ ಕೃಷ್ಣಮೃಗಗಳಂಥ ಪ್ರಬೇಧಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂಖ್ಯೆ ಹೆಚ್ಚಿಸಲು ಮೃಗಾಲಯದಲ್ಲಿ ಇರಿಸಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಅವು ಮೃತಪಟ್ಟಿರುವುದು ಸ್ವೀಕಾರಾರ್ಹವಲ್ಲ. ಬ್ಯಾಕ್ಟೀರಿಯಾ ಸೋಂಕಿನಿಂದ ಅವು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಪರೀಕ್ಷಾ ವರದಿಗೆ ನಾವು ಕಾಯುತ್ತಿದ್ದೇವೆ’ ಎಂದರು.

ADVERTISEMENT

‘ಮೃಗಾಲಯದಲ್ಲಿನ ವೈದ್ಯಕೀಯ ತಂಡವು ಪ್ರಾಣಿಗಳ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಆದರೆ, ಇಲ್ಲಿ ಅದು ನಡೆದಿಲ್ಲ ಎಂಬಂತೆ ತೋರುತ್ತಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್ ಕೂಡ ಭಾನುವಾರ ಕಿರು ಮೃಗಾಲಯಕ್ಕೆ ಭೇಟಿ ನೀಡಿದ್ದು, ವರದಿ ಸಲ್ಲಿಸಲಿದ್ದಾರೆ. ಒಳಾಂಗಗಳ ಪರೀಕ್ಷೆ ವರದಿ ಮತ್ತು ಸದಸ್ಯ ಕಾರ್ಯದರ್ಶಿ ವರದಿಯ ಆಧರಿಸಿ, ವರದಿಯಲ್ಲಿ ಅಧಿಕಾರಿಗಳ ವಿರುದ್ಧ ದೋಷಾರೋಪ ಮಾಡಿದ್ದರೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತರುತ್ತೇನೆ’ ಎಂದು ಅವರು ಹೇಳಿದರು.

‘ಮೃಗಾಲಯದಲ್ಲಿರುವ ಪ್ರಾಣಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ಮತ್ತು 31 ಕೃಷ್ಣಮೃಗಗಳ ಸಾವಿಗೆ ಕಾರಣವಾದ ಮೃಗಾಲಯದ ಸಿಬ್ಬಂದಿ ಲೋಪಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಭೆ ಮುಂದಿನ ವಾರ ನಡೆಯಲಿದೆ’ ಎಂದು ರಂಗಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.