
ಬೆಳಗಾವಿ: ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಇರುವ ಏಳು ಕೃಷ್ಣಮೃಗಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದೆ.
ಕಳೆದ ಮೂರು ದಿನಗಳಿಂದ ಪ್ರಾಣಿಗಳ ಸಾವಿನ ಪ್ರಕರಣ ವರದಿಯಾಗಿಲ್ಲ. ಪರಿಸ್ಥಿತಿ ಹತೋಟಿಗೆ ಬರುತ್ತಿರುವ ಕಾರಣ, ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಗಳಲೆ ರೋಗದಿಂದ (ಇಂಡೀಡ್ ಹೆಮರೈಜಿಕ್ ಸೆಪ್ಟೀಸಿಮಿಯಾ) ಕಿರು ಮೃಗಾಲಯದಲ್ಲಿದ್ದ 31 ಕೃಷ್ಣಮೃಗಗಳು ಸಾವನ್ನಪ್ಪಿವೆ. ಈಗ ಬದುಕುಳಿದ ಏಳು ಪ್ರಾಣಿಗಳು ಎಂದಿನಂತೆ ಗುರುವಾರ ಆಹಾರ ಸೇವಿಸಿ ಲವಲವಿಕೆಯಿಂದ ಓಡಾಡಿದವು.
ಬೆಂಗಳೂರಿನಿಂದ ಬಂದಿರುವ ತಜ್ಞರ ತಂಡ ಇಲ್ಲಿಯೇ ಬೀಡುಬಿಟ್ಟು, ಕೃಷ್ಣಮೃಗಗಳಿಗೆ ಔಷಧೋಪಚಾರ ಮಾಡುತ್ತಿದೆ.
‘ಏಳು ಕೃಷ್ಣಮೃಗಗಳು ಸೋಂಕಿಗೆ ಒಳಗಾಗಿದ್ದು, 10 ದಿನ ಅವುಗಳ ಮೇಲೆ ನಿಗಾ ಇರಿಸುವಂತೆ ನಿರ್ದೇಶನ ನೀಡಲಾಗಿದೆ. ಐದು ದಿನಗಳಿಂದ ಅವು ಆರೈಕೆಗೆ ಸ್ಪಂದಿಸುತ್ತಿದ್ದು, ನ.25ರವರೆಗೆ ನಿಗಾ ಇರಿಸುತ್ತೇವೆ. ದಿನದಿಂದ ದಿನಕ್ಕೆ ಅವುಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಸೋಂಕು ಹರಡದಂತೆ ತಡೆಯಲು ಎಲ್ಲ ರೀತಿಯ ಕ್ರಮ ವಹಿಸಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ಪವನ ಕುರನಿಂಗ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.