ಸಾಂದರ್ಭಿಕ ಚಿತ್ರ
ಬೆಳಗಾವಿ: ಗಳಿಕೆ ರಜೆ ನಗದೀಕರಣ ಮಾಡಲು ಠರಾವು ಪ್ರತಿ ನೀಡಲು ಲಂಚ ಪಡೆಯುತ್ತಿದ್ದ ವೇಳೆ, ಇಲ್ಲಿನ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಕೆ.ಬಿ. ಹಿರೇಮಠ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಾಗರನೂರಿನ ಬಸವೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರಾಜಾರಾಮ ಮದಾಳೆ ಅವರ ಗಳಿಕೆ ರಜೆ ನಗದೀಕರಣ ಮಾಡುವುದಕ್ಕೆ ಆಡಳಿತ ಮಂಡಳಿಯಿಂದ ಠರಾವು ಪ್ರತಿ ನೀಡಬೇಕು. ಇದಕ್ಕಾಗಿ ಗಳಿಕೆ ರಜೆಯ ಹಣದ ನಗದೀಕರಣದ ಶೇ 25ರಷ್ಟು ಅಂದರೆ; ₹13,150 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ರವೀಂದ್ರ ಅವರು ಲೋಕಾಯುಕ್ತರಿಗೆ ತಿಳಿಸಿದ್ದರು.
ಆರೋಪಿಯು ಪ್ರೌಢಶಾಲಾ ವಿಭಾಗದ ಕಾರ್ಯಾಲಯದಲ್ಲಿ ಲಂಚದ ಹಣ ಪಡೆಯುವಾಗ ಸಿಕ್ಕಿಬಿದ್ದರು. ಅವರನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಎಎಸ್ಪಿ ಬಿ.ಎಸ್. ಪಾಟೀಲ, ತನಿಖಾಧಿಕಾರಿ ಇನ್‌ಸ್ಪೆಕ್ಟರ್‌ಗಳಾದ ಆರ್.ಎಲ್. ಧರ್ಮಟ್ಟಿ, ಇನ್‌ಸ್ಪೆಕ್ಟರ್ ಅಜೀಜ್ ಕಲಾದಗಿ, ಅನ್ನಪೂರ್ಣ ಹುಲಗೂರ, ಸಿಬ್ಬಂದಿ ರವಿ ಮಾವರಕರ, ಗಿರೀಶ ಪಾಟೀಲ, ವಿಠ್ಠಲ ಬಸಕ್ರಿ, ಸಂತೋಷ ಬೆಡಗ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.