ಸುಪ್ರೀಂ ಕೋರ್ಟ್
ಬೆಳಗಾವಿ: ಜಮೀನನ್ನು ಅಣ್ಣ– ತಮ್ಮಂದಿರ ಹೆಸರಿಗೆ ಮಾಡಿಕೊಡಲು ₹500 ಲಂಚ ಪಡೆದ ಗ್ರಾಮಲೆಕ್ಕಿಗನಿಗೆ (ವಿಲೇಜ್ ಅಕೌಂಟಂಟ್) ಸುಪ್ರೀಂಕೋರ್ಟ್ 30 ವರ್ಷಗಳ ಬಳಿಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
‘ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮ ಲೆಕ್ಕಿಗ ನಾಗೇಶ ದೊಂಡು ಶಿವಂಗೇಕರ ಬಂಧಿತ. ಸುಪ್ರೀಂಕೋರ್ಟ್ ಆದೇಶದಂತೆ ಅವರನ್ನು ಬುಧವಾರ ಬಂಧಿಸಿ, ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ’ ಎಂದು ಲೋಕಾಯುಕ್ತ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಪ್ರಕರಣ ಏನು?:
1995ರಲ್ಲಿ ಕಡೋಲಿ ರೈತ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಅವರು ತಮ್ಮ ಸಹೋದರನೊಂದಿಗೆ ಜಮೀನು ಹಂಚಿಕೆ (ವಾಟ್ನಿ) ಮಾಡಿ ಉತಾರ ಕೊಡಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಗ್ರಾಮಲೆಕ್ಕಿಗ ₹500 ಲಂಚ ಕೇಳಿದ್ದರು. ಇದನ್ನು ರೈತ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು. ಜಾಲ ಬೀಸಿದ ಅಧಿಕಾರಿಗಳು ಲಂಚ ಪಡೆಯುವಾಗ ಬಂಧಿಸಿದ್ದರು.
ಆಗಿನ ಬೆಳಗಾವಿ ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಎಂ.ಎಸ್. ದಂಡಿನ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯವು 2006ರ ಜೂನ್ 14ರಂದು ನಾಗೇಶಗೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ₹1,000 ದಂಡ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ನಾಗೇಶ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. 2012ರ ಮಾರ್ಚ್ 9ರಂದು ಹೈಕೋರ್ಟ್, ನಾಗೇಶ ನಿರಪರಾಧಿ ಎಂದು ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಲೋಕಾಯುಕ್ತ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೇ ಏಪ್ರಿಲ್ 16ರಂದು ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತು. ಅಲ್ಲದೇ ಬೆಳಗಾವಿ ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿಯಿತು. ಆಪಾದಿತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಆದೇಶದಂತೆ ಬುಧವಾರ ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.