ರಾಮದುರ್ಗ: ಜೀವದ ಹಂಗು ತೊರೆದು ಸಮಾಜದಲ್ಲಿಯ ನೂನ್ಯತೆ ಹೆಕ್ಕಿ ಸರ್ಕಾರದ ಗಮನಕ್ಕೆ ತರುವ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಾಮೇಷ ತೋರುತ್ತಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ನೇರವಾಗಿ ಆರೋಪಿಸಿದರು.
ರಾಮದುರ್ಗದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಮಹಿಳೆರಿಗೂ ಶಕ್ತಿ ಯೋಜನೆಯಡಿ ಉಚಿತ ಬಸ್ ಪಾಸ್ ನೀಡಿ ಮುಖ್ಯಮಂತ್ರಿಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಬಸ್‌ಪಾಸ್ ನೀಡಲು ಕಷ್ಟಕರ ಮಾನದಂಡಗಳನ್ನು ವಿಧಿಸಿ ಕೇವಲ ಜಿಲ್ಲಾ ವ್ಯಾಪ್ತಿಗೆ ಮೀಸಲು ಮಾಡಿರುವುದು ಪತ್ರಕರ್ತರ ವಿರೋಧಿ ಧೋರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಪಿಐ ವಿನಾಯಕ ಬಡಿಗೇರ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ಬಹಿರಂಗ ಪಡಿಸುವ ವರದಿಗಾರರು ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು. ಯಾರನ್ನೋ ಖುಷಿ ಪಡಿಸಲು ಪತ್ರಿಕಾಧರ್ಮಕ್ಕೆ ಅಪಚಾರವಾಗದಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಅವರಾದಿಯ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಪುರಸಭೆ ಅಧ್ಯಕ್ಷ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ್, ಡಾ. ನವೀನ ನಿಜಗುಲಿ, ಕಾನಿಪ ಧ್ವನಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಶಿರಸಂಗಿ, ತಾಲ್ಲೂಕು ಅಧ್ಯಕ್ಷ ರಮೇಶ ರಾಯಬಾಗ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು. ಕೆಲ ಹಿರಿಯ ಪತ್ರಕರ್ತರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.