ADVERTISEMENT

ಬೆಳಗಾವಿ: ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಮೇ 2020, 4:19 IST
Last Updated 19 ಮೇ 2020, 4:19 IST
ಬೆಂಗಳೂರಿಗೆ ಹೊರಟ ಮೊದಲ ಬಸ್‌ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಹಸಿರು ನಿಶಾನೆ ತೋರಿದರು
ಬೆಂಗಳೂರಿಗೆ ಹೊರಟ ಮೊದಲ ಬಸ್‌ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಹಸಿರು ನಿಶಾನೆ ತೋರಿದರು   

ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಸಾರಿಗೆ ಬಸ್ಸುಗಳ ಕಾರ್ಯಾಚರಣೆ ಆರಂಭಿಸಲಾಗಿದೆ.

ಬೆಳಗಾವಿ ವಿಭಾಗದಿಂದ 252 ಹಾಗೂ ಚಿಕ್ಕೋಡಿ ವಿಭಾಗದಿಂದ 220 ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬರುತ್ತಿದ್ದಾರೆ. ಸಾಲಿನಲ್ಲಿ ಅವರನ್ನು ನಿಲ್ಲಿಸಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಎಲ್ಲಿಂದ ಬಂದಿದ್ದಾರೆ, ಯಾವ ಊರಿಗೆ ಹೋಗಬೇಕು ಹಾಗೂ ಮೊಬೈಲ್ ಸಂಖ್ಯೆಯ ವಿವರ ಸಂಗ್ರಹಿಸುತ್ತಿದ್ದಾರೆ. ನಂತರ ನಿಗದಿತ ಅಂಕಣಕ್ಕೆ ಕಳುಹಿಸುತ್ತಿದ್ದಾರೆ. ಪ್ರಯಾಣಿಕರು ಅಂತರ ಕಾಪಾಡಿಕೊಳ್ಳಲು ಬಣ್ಣದಿಂದ ಚೌಕದ ಮಾರ್ಕ್ ಮಾಡಲಾಗಿದೆ. ಒಂದು ಬಸ್ಸಲ್ಲಿ 30 ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗುತ್ತಿದೆ.

ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಗೋಕಾಕ, ವಿಜಯಪುರ ಮೊದಲಾದ ಕಡೆಗಳಿಗೆ ತೆರಳಲು ಪ್ರಯಾಣಿಕರು ಬಂದಿದ್ದಾರೆ. ಪ್ರವೇಶ ದ್ವಾರದಲ್ಲಿ ಸೋಂಕುಗಳೆತ ಸುರಂಗ ಮಾರ್ಗ ಹಾಕಲಾಗಿದೆ. ಅದರಲ್ಲಿ ಬರುವಂತೆ ಜನರಿಗೆ ತಿಳಿಸಲಾಗುತ್ತಿದೆ.

ADVERTISEMENT

ಚಾಲಕರು, ನಿರ್ವಾಹಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. 50 ವರ್ಷ ವಯಸ್ಸಿನ ಮೇಲಿನವರನ್ನು ನಿಯೋಜಿಸಿಲ್ಲ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ 'ಪ್ರಜಾವಾಣಿ'ಗೆ ತಿಳಿಸಿದರು.

ಬೆಳಿಗ್ಗೆ ಬೆಂಗಳೂರಿಗೆ ಒಂದು ಬಸ್ ಹೋಗಿದೆ. ನಾಳೆಯಿಂದ ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಂಡು ಹೋಗಬಹುದು. ಸಾಮಾನ್ಯವಾಗಿ ಬೆಂಗಳೂರಿಗೆ ಹೋಗುವವರು ರಾತ್ರಿ ವೇಳೆಯಲ್ಲಿ ಪ್ರಯಾಣಕ್ಕೆ ಆದ್ಯತೆ ಕೊಡುತ್ತಾರೆ. ಆದರೆ, ಲಾಕ್ ಡೌನ್ ಇರುವುದರಿಂದ ಬೆಳಿಗ್ಗೆ 7ರಿಂದ ಸಂಜೆ 7ರವರೆಗಷ್ಟೇ ಬಸ್‌ಗಳ ಸಂಚಾರಕ್ಕೆ ಅವಕಾಶವಿದೆ. ರಾತ್ರಿ ವೇಳೆಯಲ್ಲಿ ಬಸ್‌ಗಳ ಕಾರ್ಯಾಚರಣೆ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರು ಹಗಲಲ್ಲೇ ಪ್ರಯಾಣಿಸಬೇಕಾಗುತ್ತದೆ ಎಂದು ಮುಂಜಿ ಮಾಹಿತಿ ನೀಡಿದರು.

ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ಬಸ್ ಸಂಚಾರಕ್ಕೆ ಹಸಿರುನಿಶಾನೆ ತೋರಿದರು. ಈ ಬಸ್‌ನಲ್ಲಿ ಪ್ರಯಾಣಿಸಿದವರಿಗೆ ಸಿಹಿ ಹಂಚಲಾಯಿತು. ನಗರದಲ್ಲಿ ಸಿಟಿ ಬಸ್ ಗಳ ಸಂಚಾರ ಕೂಡ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.