ADVERTISEMENT

ಕನ್ನಡ ಸಂಸ್ಕೃತಿ ಉಳಿಸಿದ್ದು ಮಠಗಳು: ಬಿ.ವೈ.ವಿಜಯೇಂದ್ರ

ಯಲ್ಲಾಲಿಂಗ ಮಹಾರಾಜರ 40ನೇ ಪುಣ್ಯಸ್ಮರಣೋತ್ಸವ ಸಮಾರೋಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 4:58 IST
Last Updated 17 ಜನವರಿ 2026, 4:58 IST
<div class="paragraphs"><p>ಮುಗಳಖೋಡದಲ್ಲಿ ಶುಕ್ರವಾರ ನಡೆದ ಯಲ್ಲಾಲಿಂಗ ಮಹಾರಾಜರ 40ನೇ ಪುಣ್ಯಾರಾಧನೆ ಸಮಾರೋಪ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು</p></div>

ಮುಗಳಖೋಡದಲ್ಲಿ ಶುಕ್ರವಾರ ನಡೆದ ಯಲ್ಲಾಲಿಂಗ ಮಹಾರಾಜರ 40ನೇ ಪುಣ್ಯಾರಾಧನೆ ಸಮಾರೋಪ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು

   

ಮುಗಳಖೋಡ: ‘ಜಾತಿ– ಜಾತಿ ಎಂಬುದು ಕೇವಲ ರಾಜಕಾರಣಿಗಳಲ್ಲಿ ಮಾತ್ರ ಇದೆ. ಮಠಗಳಲ್ಲಿ ಅಲ್ಲ. ನಮ್ಮ ಕನ್ನಡ ನಾಡು ಒಳ್ಳೆಯ ಸಂಸ್ಕೃತಿ, ಸಂಸ್ಕಾರದಿಂದ ಕೂಡಿರಲು ಮಠಗಳೇ ಕಾರಣ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯ ಪಟ್ಟರು.

ಪಟ್ಟಣದಲ್ಲಿ ಯಲ್ಲಾಲಿಂಗ ಮಹಾರಾಜರ 40ನೇ ಪುಣ್ಯಸ್ಮರನೊತ್ಸವದ ಕೊನೆಯ ದಿನವಾದ ಶುಕ್ರವಾರ, ಪುಷ್ಪವೃಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಗಳಖೋಡ ಮಠದ ಸಾಮಾಜಿಕ ಕಾರ್ಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವತ್ತಿನ ದಿನ ಮನುಷ್ಯರಲ್ಲಿ ಮಾನವೀಯತೆ ಕೊಂಡಿಗಳು ಕಳಚಿ ಬೀಳುತ್ತಿವೆ. ಜಾತಿ, ಧರ್ಮ, ಜನಾಂಗ ಎಂಬ ಭೇದ ಭಾವಗಳಿಲ್ಲದೆ ಎಲ್ಲರನ್ನೂ ಒಂದೇ  ತಕ್ಕಡಿಯಲ್ಲಿಟ್ಟು ತೂಗುತ್ತಿರುವ ಇಂತಹ ಮಠಗಳಿಂದ ಸಂಸ್ಕೃತಿ, ಸಂಸ್ಕಾರ ಉಳಿಯಲು ಸಾಧ್ಯ’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಮುಗಳಖೋಡ– ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ‘ಆಳಾಗಿ ದುಡಿದರೆ ಅರಸನಾಗಿ ಉಣ್ಣಬಹುದು. ಸತ್ಯ, ಧರ್ಮದಿಂದ ನಡೆದರೆ ಕಷ್ಟಗಳೇ ಇಲ್ಲದ ನಮ್ಮ‌ ಜೀವನ ಸರ್ವ ಶ್ರೇಷ್ಠವಾಗಿ, ಸ್ವರ್ಗದ ಕಡೆಗೆ ನಡೆಯುತ್ತದೆ’ ಎಂದು ಆಶೀರ್ವಚನ ನೀಡಿದರು.

‘ಮುಗಳಖೋಡ ಮಠ ಸರ್ವಧರ್ಮ ಸಮನ್ವಯ ಸಾರುತ್ತದೆ.  ಸಮಾಜ ಬಹಳ ಸೂಕ್ಷ್ಮವಾಗಿದೆ. ಜೀವನಕ್ಕೆ ಸಂಕಟ ಬಂದರು ಕೂಡಾ ಶ್ರದ್ದೆ, ಭಕ್ತಿಯಿಂದ ನಡೆದು ನಾವೆಲ್ಲರೂ ಒಂದು ಎಂಬ ಭಾವ ಪ್ರೇಮತ್ವದ ಬದುಕು ನಮ್ಮದಾಗಬೇಕು. ಎಲ್ಲರೂ ನ್ಯಾಯ ಧರ್ಮದಿಂದ ನಡೆಯಬೇಕು’ ಎಂದರು.

‘12ನೇ ಶತಮಾನದ ಸಮಾನತೆಯನ್ನು ಪ್ರಚಲಿತವಾಗಿ ಮುಗಳಖೋಡ ಮಠದಲ್ಲಿ ಕಾಣುತ್ತೇವೆ. ಬಳಲಿ ಬಂದ ಭಕ್ತರನ್ನು ತಾಯಿ ಹೃದಯದಿಂದ ಕಾಣುವ ಏಕೈಕ ಮಠ ಇದಾಗಿದೆ. ಹಸಿದವರಿಗೆ ಅನ್ನ ಮತ್ತು ಜ್ಞಾನ ಎರಡನ್ನು ಉಣಬಡಿಸಿ ಭಕ್ತರ ಬಾಳಿಗೆ ಬೆಳಕಾಗಿರುವ ಮಠವಿದು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.

ಇದೇ ವೇಳೆ ಶ್ರೀಗಳು ಬಿಜೆಪಿ ರಾಜ್ಯ ಘಟಜದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಮ್ಮುಖದಲ್ಲಿ ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆಯ  ಶಿಖರಕ್ಕೆ ಪುಷ್ಪವೃಷ್ಟಿ ನೆರವೇರಿಸಿದರು.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ, ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಭಕ್ತರ ಸಮ್ಮುಖದಲ್ಲಿ ಶ್ರೀಗಳಿಗೆ ಸುವರ್ಣ ಕಿರೀಟ ತೊಡಿಸಿದರು. ಶಾಸ್ತ್ರೋಕ್ತವಾಗಿ ಪಾದಪೂಜೆ ನೆರವೇರಿಸಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಶಶಿಕಲಾ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಮಾತನಾಡಿದರು. ಶೇಗುಣಸಿ ವಿರಕ್ತ ಮಠದ ಮಹಾಂತ ಪ್ರಭು ಸ್ವಾಮಿಗಳು, ಮುದಗಲ್ಲದ ಮಹಾಂತ ಶಿವಯೋಗಿಗಳು, ಯಶವಂತಗೌಡ ಪಾಟೀಲ, ತಿಪ್ಪಣ್ಣಪ್ಪ ಕಲ್ಲಾಪ್ಪಗೋಳ ಮಾತನಾಡಿದರು.

‘ಸಮಾಜದ ಸನ್ಮಾರ್ಗಕ್ಕೆ ಮಠಗಳು ಅಗತ್ಯ’

ಮುಗಳಖೋಡ: ‘ನಮ್ಮ ಆಧ್ಯಾತ್ಮಿಕ ಪರಂಪರೆಯಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಠಗಳು ಮಠಾಧೀಶರ ಮಾರ್ಗದರ್ಶನದ ಕಾರಣ ನಮ್ಮ ಸಮಾಜ ಸನ್ಮಾರ್ಗದಲ್ಲಿ ಸಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ಯಲ್ಲಾಲಿಂಗ ಮಹಾಪ್ರಭುಗಳ 40ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸುವ ಕಾರ್ಯ ಮಠಗಳಿಂದ ಆಗುತ್ತಿದೆ’ ಎಂದರು.

‘ಭಾರತ ದೇಶ ಅಧ್ಯಾತ್ಮ ಪರಂಪರೆಯ ದೇಶ. ಇಲ್ಲಿ ನಾವು ಇಷ್ಟು ಅನ್ಯೋನ್ಯವಾಗಿ ಇರುವುದಕ್ಕೆ ಮಠ ಮಾನ್ಯಗಳು ನಮ್ಮನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವುದೇ ಕಾರಣ. ದಾಸೋಹ ಪರಂಪರೆಯನ್ನು ಜಗತ್ತಿಗೆ ಸಾರಿದ ಮಹಾಪುಣ್ಯಾತ್ಮರು ಯಲ್ಲಾಲಿಂಗ ಶ್ರೀಗಳು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.