ADVERTISEMENT

ಸಚಿವ, ಶಾಸಕರಿಂದ ಸಿಎಎ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 14:38 IST
Last Updated 5 ಜನವರಿ 2020, 14:38 IST
ಬೆಳಗಾವಿಯ ಅಜಂನಗರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭಾನುವಾರ ಮನೆಗಳಿಗೆ ತೆರಳಿ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಮಾಹಿತಿ ನೀಡಿದರು
ಬೆಳಗಾವಿಯ ಅಜಂನಗರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭಾನುವಾರ ಮನೆಗಳಿಗೆ ತೆರಳಿ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಮಾಹಿತಿ ನೀಡಿದರು   

‌ಬೆಳಗಾವಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತ ಜನಜಾಗೃತಿ ಅಭಿಯಾನಕ್ಕೆ ಬಿಜೆಪಿ ಮುಖಂಡರು ಮತ್ತು ಜನಪ್ರತಿನಿಧಿಗಳು ಭಾನುವಾರ ಚಾಲನೆ ನೀಡಿದ್ದಾರೆ. ಮನೆ ಮನೆಗಳಿಗೆ ತೆರಳಿ ಮಾಹಿತಿ ನೀಡುವ ಕೆಲಸ ಆರಂಭಿಸಿದ್ದಾರೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಜಂ ನಗರ, ಶಾಹೂನಗರ ಹಾಗೂ ಸಂಗಮೇಶ್ವರ ನಗರದಲ್ಲಿ ಮುಸ್ಲಿಮರು ಸೇರಿದಂತೆ ಹಲವರ ಮನೆಗಳಿಗೆ ಭೇಟಿ ನೀಟಿ ಸಿಎಎ ಕುರಿತ ಮಾಹಿತಿಪತ್ರಗಳನ್ನು ವಿತರಿಸಿದರು.

‘ಸಿಎಎಯಿಂದ ದೇಶದ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿನ ಸಿಖ್, ಜೈನ, ಬೌದ್ಧ ಧರ್ಮದವರು ಅಲ್ಪಸಂಖ್ಯಾತರಾಗಿದ್ದಾರೆ. ಮುಸ್ಲಿಂ ರಾಷ್ಟ್ರವಾಗಿರುವುದರಿಂದಾಗಿ ಅವರು ಅಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಹಕ್ಕು ಮತ್ತು ಗೌರವ ದೊರಕಿಸಿಕೊಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಇದಕ್ಕಾಗಿ ಸಿಎಎ ಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಜಾಧವ, ಅನೂಪ್, ಯುವ ಮೋರ್ಚಾ ಅಧ್ಯಕ್ಷ ವಿಕ್ರಂ ಕಿಲ್ಲೇಕರ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ತಾಜ್ ಶೇಖ್, ಸಲೀಂ ತಹಶೀಲ್ದಾರ್‌, ಗೂಳಪ್ಪ ಹೊಸಮನಿ ಇದ್ದರು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ‌‌ಕ್ಷೇತ್ರದ ಶಾಸಕ ಅನಿಲ ಬೆನಕೆ ಕೂಡ ಅವರ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರೊಂದಿಗೆ ತೆರಳಿ ಸಿಎಎ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.