ADVERTISEMENT

ಮಕ್ಕಳಲ್ಲೂ ತೀವ್ರವಾಗಿ ಹರಡುತ್ತಿದೆ ಕ್ಯಾನ್ಸರ್‌..!

ಫೆಬ್ರುವರಿ 15– ಅಂತರರಾಷ್ಟ್ರೀಯ ಚಿಕ್ಕಮಕ್ಕಳ ಕ್ಯಾನ್ಸರ್‌ ದಿನ

ಶ್ರೀಕಾಂತ ಕಲ್ಲಮ್ಮನವರ
Published 14 ಫೆಬ್ರುವರಿ 2020, 12:29 IST
Last Updated 14 ಫೆಬ್ರುವರಿ 2020, 12:29 IST

ಬೆಳಗಾವಿ: ಕ್ಯಾನ್ಸರ್‌ ಇವತ್ತು ಸರ್ವವ್ಯಾಪಿಯಾಗಿದೆ. ದೇಶ, ಪ್ರದೇಶ, ಲಿಂಗ ತಾರತಮ್ಯ ಇಲ್ಲದೇ ಎಲ್ಲೆಡೆ ಹರಡುತ್ತಿದೆ. ಇದುವರೆಗೆ ವಯಸ್ಕರರಲ್ಲಿ ಕಾಣುತ್ತಿದ್ದ ಈ ‘ಹೆಮ್ಮಾರಿ’ ಚಿಕ್ಕಮಕ್ಕಳಲ್ಲಿ ಕಾಣಿಸಲಾರಂಭಿಸಿ, ಆತಂಕ ಮೂಡಿಸಿದೆ.

ತಂಬಾಕು ಸೇವನೆ, ವಿಪರೀತ ಕುಡಿತ ಸೇರಿದಂತೆ ವಿವಿಧ ದುರಭ್ಯಾಸಗಳಿಂದಾಗಿ ವಯಸ್ಕರರಲ್ಲಿ, ವೃದ್ಧರಲ್ಲಿ ಕಾಣಿಸಿಕೊಳ್ಳುತ್ತದೆ, ಮಕ್ಕಳಲ್ಲಿ ಕಾಣಿಸಿಕೊಳ್ಳಲ್ಲ ಎನ್ನುವ ಮಿಥ್ಯವನ್ನು ಹೊಡೆದುಹಾಕಿದೆ. ವಿಶ್ವದಲ್ಲಿ ಪ್ರತಿವರ್ಷ ಅಂದಾಜು 3 ಲಕ್ಷ ಮಕ್ಕಳಲ್ಲಿ ಇದು ಪತ್ತೆಯಾಗಿದೆ. ದೇಶದಲ್ಲಿ ಅಂದಾಜು 75ಸಾವಿರ ಮಕ್ಕಳು ಹಾಗೂ ರಾಜ್ಯದಲ್ಲಿ ಅಂದಾಜು 10 ಸಾವಿರದಿಂದ 12 ಸಾವಿರ ಮಕ್ಕಳು ಇದಕ್ಕೆ ಒಳಗಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಏರುಗತಿಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ.

ಮಕ್ಕಳಲ್ಲಿ ವಿವಿಧ ರೀತಿಯ ಕ್ಯಾನ್ಸರ್‌ ಕಂಡುಬರುತ್ತದೆ. ರಕ್ತ ಕ್ಯಾನ್ಸರ್‌, ದುಗ್ದರಸ ಗ್ರಂಥಿಗ (ಲಿಂಫ್‌ ಗ್ಲ್ಯಾಂಡ್ಸ್‌) ಕ್ಯಾನ್ಸರ್‌, ಮೆದುಳು ಗಡ್ಡೆ (ಬ್ರೇನ್‌ ಟ್ಯೂಮರ್‌) ಕ್ಯಾನ್ಸರ್‌, ಕಿಡ್ನಿ ಕ್ಯಾನ್ಸರ್‌, ಮೂಳೆ (ಸರ್ಕೊಮ) ಕ್ಯಾನ್ಸರ್‌ ಕಂಡುಬರುತ್ತದೆ. ಇದರಲ್ಲಿ ರಕ್ತ ಕ್ಯಾನ್ಸರ್‌ ಹೆಚ್ಚಿನ ಮಕ್ಕಳಲ್ಲಿ ಕಂಡುಬರುತ್ತಿದೆ.

ADVERTISEMENT

ಲಕ್ಷಣಗಳು:ಬಹುದಿನಗಳವರೆಗೆ ಜ್ವರ ಆವರಿಸಿರುವುದು, ದೇಹದ ಯಾವುದೋ ಒಂದು ಭಾಗ ಊತುಕೊಳ್ಳುವುದು, ಶಕ್ತಿ ಹೀನತೆ– ಗಮನಾರ್ಹವಾಗಿ ದೇಹ ತೂಕ ಕಡಿಮೆಯಾಗುವುದು, ವಿಪರೀತ ಮೂಳೆ ನೋವು, ತಲೆನೋವು ಮತ್ತು ವಾಂತಿ, ರಕ್ತಸ್ರಾವ, ಕಣ್ಣು ಮಂಜಾಗುವುದು ಹಾಗೂ ಕಣ್ಣಲ್ಲಿ ಬಿಳಿ ಚುಕ್ಕೆ ಕಾಣುವ ಲಕ್ಷಣಗಳು ಕಂಡುಬರುತ್ತವೆ. ಇಂತಹ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿದರೆ, ತಕ್ಷಣ ಪಾಲಕರು ವೈದ್ಯರನ್ನು ಸಂಪರ್ಕಿಸಬೇಕು.

ಹಲವು ಕಾರಣಗಳು:‘ದೇಹದಲ್ಲಿರುವ ಅಸಾಮಾನ್ಯ ಜೀವಕೋಶಗಳ ಅನಿಯಂತ್ರಣ ಬೆಳವಣಿಗೆಗೆ ಕ್ಯಾನ್ಸರ್‌ ಎನ್ನುತ್ತಾರೆ. ಇದು ಯಾವ ವಯಸ್ಸಿನಲ್ಲಿಯಾದರೂ ಸಂಭವಿಸಬಹುದು. ಇಂತಹದ್ದೇ ಕಾರಣಕ್ಕೆ ಬರುತ್ತದೆ ಎಂದು ಇನ್ನೂ ದೃಢಪಟ್ಟಿಲ್ಲ. ಸದ್ಯಕ್ಕೆ ಲಭ್ಯ ಇರುವ ಮಾಹಿತಿ ಪ್ರಕಾರ, ಅನುವಂಶಿಕ, ಜೀವನ ಶೈಲಿ, ಪರಿಸರದ ಪ್ರಭಾವ ಹಾಗೂ ದೇಹದಲ್ಲಾಗುವ ವ್ಯತಿರಿಕ್ತ ಬದಲಾವಣೆಗಳು ಕಾರಣವಾಗಬಹುದು’ ಎಂದು ಚಿಕ್ಕಮಕ್ಕಳ ಕ್ಯಾನ್ಸರ್‌ ತಜ್ಞೆ, ಕೆಎಲ್‌ಇ ಆಸ್ಪತ್ರೆಯ ವೈದ್ಯೆ ಡಾ.ಅಭಿಲಾಷಾ ಸಂಪಗಾರ ಹೇಳಿದರು.

‘ಚಿಕ್ಕಮಕ್ಕಳ ವಿಷಯದಲ್ಲೂ ಕಾರಣ ಸ್ಪಷ್ಟವಾಗಿ ತಿಳಿಯುವುದಿಲ್ಲ. ನವಜಾತ ಶಿಶುವಿನಿಂದ ಹಿಡಿದು ಯಾವುದೇ ವಯಸ್ಸಿನಲ್ಲಿಯೂ ಕ್ಯಾನ್ಸರ್‌ ಬರಬಹುದು. ಆದರೆ, ಕ್ಯಾನ್ಸರ್‌ ಬಂದಿರುವುದನ್ನು ಕೆಲವು ಗುಣಲಕ್ಷಣಗಳಿಂದ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಬಹುದು. ಪ್ರಾಥಮಿಕ ಹಂತದಲ್ಲಿ ಪತ್ತೆಯಾದರೆ, ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ರೋಗ ಗುಣಹೊಂದಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಗುಣಮುಖವಾಗುವ ತೀವ್ರತೆ ವೇಗವಾಗಿರುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಗುಣಮುಖರಾಗುತ್ತಾರೆ’ ಎಂದು ಅವರು ತಿಳಿಸಿದರು.

ಜಾಗೃತಿ ಮೂಡಿಸಬೇಕಾಗಿದೆ:‘ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳಿಗೆ ಕ್ಯಾನ್ಸರ್‌ ಬರಬಹುದು ಎನ್ನುವ ವಿಷಯವು ಪೋಷಕರಿಗೆ ತಿಳಿದಿರುವುದಿಲ್ಲ. ಆಸ್ಪತ್ರೆಗೆ ದಾಖಲಾದ ನಂತರ, ನಾವು ಹೇಳಿದ ನಂತರ ಅವರ ಅರಿವಿಗೆ ಬರುತ್ತದೆ. ಕೇವಲ ದೊಡ್ಡವರಿಗೆ ಮಾತ್ರ ಅಲ್ಲ, ಮಕ್ಕಳಿಗೂ ಕ್ಯಾನ್ಸರ್‌ ಬರುತ್ತದೆ ಎನ್ನುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಇದೇ ಈಗ ನಮ್ಮ ಮುಂದಿರುವ ಸವಾಲು. ಅದಕ್ಕಾಗಿ ಹಲವು ಕಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.