ಬೆಳಗಾವಿ: ‘ನಮಗೆ ಜಾತಿ ಗಣತಿ ಬಗ್ಗೆ ಅಷ್ಟೊಂದು ಸಮಾಧಾನ ಮತ್ತು ತೃಪ್ತಿ ಇಲ್ಲ. ಹಾಗಾಗಿ ಮರು ಜಾತಿ ಗಣತಿ ಮಾಡಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರನ್ನೂ ಸಂಪರ್ಕಿಸದೆ ಮಾಡಿದ ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ. ನಮ್ಮ ಸಮುದಾಯದ ಮಠಾಧೀಶರು, ಅಖಿಲ ಭಾರತ ವೀರಶೈವ ಮಹಾಸಭಾ ಅಭಿಪ್ರಾಯವೂ ಇದೇ ಆಗಿದೆ. ಸರ್ಕಾರ ಈ ವರದಿ ಜಾರಿಗಾಗಿ ಜಿದ್ದಿಗೆ ಬಿದ್ದರೆ, ಸಮಾಜದ ಹಿರಿಯರೆಲ್ಲ ಸೇರಿಕೊಂಡು ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ’ ಎಂದರು.
‘ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರೆಂದು ಬಿಂಬಿಸುತ್ತಿರುವುದನ್ನು ಮಹಾಸಭಾದ ಅಧಿವೇಶನದಲ್ಲೇ ಖಂಡಿಸಿದ್ದೇವೆ. ಮಹಾಸಭಾದೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಮತ್ತೆ ಜಾತಿ ಗಣತಿ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.