ಪ್ರಜಾವಾಣಿ ವಾರ್ತೆ
ಚಿಕ್ಕೋಡಿ: ‘ರಾಜ್ಯದಲ್ಲಿ 27 ಉಪಜಾತಿಗಳನ್ನು ಹೊಂದಿರುವ ಗೊಲ್ಲ, ಯಾದವ, ಹಣಬರ ಸಮಾಜಕ್ಕೆ ಇನ್ನಷ್ಟು ಸೌಲಭ್ಯಗಳಿಗಾಗಿ ಜಾತಿಗಣತಿಯಲ್ಲಿ ಉಪಜಾತಿಯನ್ನು ‘ಗೊಲ್ಲ’ ಎಂದು ನಮೂದಿಸುವಂತೆ ವಿಧಾನಪರಿಷತ್ ಸದಸ್ಯ, ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ ಹೇಳಿದರು.
ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಯಾದವ ಹಣಬರ ಸಂಘದ ನೇತೃತ್ವದಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ಎಸ್‌ಎಸ್ಎಲ್‌ಸಿ, ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.
‘ಕೇಂದ್ರ ಸರ್ಕಾರದ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಅನುದಾನ ಪಡೆದುಕೊಂಡು ರಾಜ್ಯದಲ್ಲಿ ಸಮಾಜ ಅಭಿವೃದ್ಧಿ ಹೊಂದಬೇಕಿದೆ’ ಎಂದರು.
ಚಿತ್ರದುರ್ಗದ ಗೊಲ್ಲಗೇರಿಯ ಶ್ರೀಕೃಷ್ಣ ಯಾದವಾನಂದ ಮಠದ ಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಗೊಲ್ಲ ಸಮುದಾಯ ಶ್ರೇಷ್ಠ ಸಮುದಾಯ. ಸಮಾಜದ ಬಗ್ಗೆ ಯಾರೂ ಕೀಳರಿಮೆ ಇಟ್ಟುಕೊಳ್ಳಬೇಡಿ. ಜಾತಿಯನ್ನು ಜರಿಯುವ ಜನರು ಅನಾದಿ ಕಾಲದಿಂದಲೂ ಇದ್ದಾರೆ. ಅದಕ್ಕೆ ತಲೆಕೆಡಿಸಿಕೊಳ್ಳದೇ ಜಾತಿಗಣತಿಯಲ್ಲಿ ಗೊಲ್ಲ ಎಂದು ಬರೆಯಿಸಬೇಕು ಎಂದು ತಿಳಿಸಿದರು.
ಮುಖಂಡರಾದ ವೆಂಕಟೇಶ ಸಿಂಧನಟ್ಟಿ, ಜಯಗೌಡ ಪಾಟೀಲ, ಶಿವಲಿಂಗ ಪೂಜಾರಿ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶೀತಲ ಮುಂಡೆ, ಮಂಜುನಾಥ ಪಾಟೀಲ, ಎನ್.ಎನ್.ಪಾಟೀಲ, ಎಸ್.ಡಿ. ಪಾಟೀಲ, ವೈ.ವೈ.ಗಡ್ಕರಿ, ವಸಂತ ಕಾರಾಕಾಯಿ, ಸಚಿನ ಖೋತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.