ADVERTISEMENT

ದೇಶನೂರಿನಲ್ಲಿ ಗುಂಪು ಘರ್ಷಣೆ: 23 ಜನರ ವಿರುದ್ಧ ದೂರು

ದೇಶನೂರಿನಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣದ ಜಗಳ ವಿಕೋಪಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 3:05 IST
Last Updated 16 ಜನವರಿ 2026, 3:05 IST
<div class="paragraphs"><p>ಹಲ್ಲೆ</p></div>

ಹಲ್ಲೆ

   

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇಶನೂರು ಗ್ರಾಮದಲ್ಲಿ ಬುಧವಾರ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.

ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಪರಿಶಿಷ್ಟ ಪಂಗಡದ ಕೆಲ ಯುವಕರು ಜಾಗದ ಸ್ವಚ್ಛತೆ ನಡೆಸಿದ್ದರು. ಆಗ ತಕರಾರು ತೆಗೆದ ಪಕ್ಕದ ಮನೆಯವರು, ‘ಪರಿಶಿಷ್ಟ ಜಾತಿಯವರ ಮನೆಯ ಹತ್ತಿರ ವಾಲ್ಮೀಕಿ ಸಮುದಾಯ ಭವನ ಬೇಡ’ ಎಂದು ವಿರೋಧಿಸಿದರು. ಎರಡೂ ಕಡೆಯವರ ನಡುವಿನ  ಮಾತು ತಾರಕಕ್ಕೇರಿತು. ವಿಕೋಪಕ್ಕೆ ತಿರುಗಿ, ಬಡಿದಾಡಿಕೊಂಡರು. ನಂತರ ಗುಂ‍ಪೊಂದು ಸದಾಶಿವ ಭಜಂತ್ರಿ ಎಂಬುವರ ಮನೆ ಮೇಲೆ ಕಲ್ಲು ತೂರಾಟ ಆರಂಭಿಸಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.

ADVERTISEMENT

‘ಸದಾಶಿವ ಭಜಂತ್ರಿ ಅವರ ಮನೆಯ ಬಾಗಿಲು, ಕಿಟಕಿ, ಶೌಚಾಲಯದ ಬಾಗಿಲುಗಳಿಗೆ ಹಾನಿಯಾಗಿದೆ. ಅಕ್ರಮವಾಗಿ ಮನೆಯೊಳಗೆ ನುಗ್ಗಿ ನಾಲ್ವರ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಶೋಭಾ ಭಜಂತ್ರಿ ಎಂಬುವರು  17 ಜನರ ವಿರುದ್ಧ ದೂರು ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಪರಿಶಿಷ್ಟ ಪಂಗಡದ ಲಕ್ಷ್ಮೀ ತಳವಾರ ಅವರು ಆರು ಜನರ ವಿರುದ್ಧ ದೂರು ನೀಡಿದ್ದಾರೆ. ‘ವಾಲ್ಮೀಕಿ ಮೂರ್ತಿ ಮತ್ತು ಸುತ್ತಲಿನ ಜಾಗ ಸ್ವಚ್ಛಗೊಳಿಸುವ ವೇಳೆ ಆರು ಮಂದಿ  ಆರೋಪಿಗಳು ಬಂದು, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.