ಜೈಲು (ಪ್ರಾತಿನಿಧಿಕ ಚಿತ್ರ)
ಅಥಣಿ: ತಾಲ್ಲೂಕಿನ ಹಾಲಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಆ.20ರಂದು ನಡೆದ ಸರಗಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲ್ಲೂಕಿನ ಲಿಂಗನೂರ ಗ್ರಾಮದ ಪ್ರದೀಪ ನಾಯಿಕ, ರಾಜೇಂದ್ರ ನಾಯಿಕ, ಅಂಕುಶ ಲೋಹಾರ ಬಂಧಿತರು. ಅವರಿಂದ ಎರಡು ದ್ವಿಚಕ್ರ ವಾಹನ, ₹6 ಲಕ್ಷ ಮೌಲ್ಯದ 60 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
‘ಗೌರವ್ವ ಕಲಶೆಟ್ಟಿ ಅವರು, ಹಾಲಳ್ಳಿ ಬಸ್ ನಿಲ್ದಾಣದಿಂದ ತೆಲಸಂಗ ರಸ್ತೆ ಮಾರ್ಗವಾಗಿ ತಮ್ಮ ಜಮೀನಿಗೆ ಹೊರಟಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು, ಮಹಿಳೆ ಕೊರಳಲ್ಲಿದ್ದ ಮಂಗಳಸೂತ್ರ, ಚಿನ್ನದ ಸರ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಗ್ಗೆ ಕನಿಷ್ಠ ಸುಳಿವು ಇರದಿದ್ದರೂ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ 15 ದಿನಗಳಲ್ಲಿ ಬಂಧಿಸಿದ್ದೇವೆ’ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಐಗಳಿ ಠಾಣೆಯಲ್ಲಿ ದಾಖಲಾದ 4, ಅಥಣಿ ಠಾಣೆಯ 2, ರಾಯಬಾಗ, ಕುಡಚಿ ಮತ್ತು ಮಹಾರಾಷ್ಟ್ರದ ಮೀರಜ್ ಗ್ರಾಮೀಣ ಠಾಣೆ ತಲಾ 1 ಸೇರಿದಂತೆ 9 ಪ್ರಕರಣಗಳಲ್ಲಿ ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.