ಚನ್ನಮ್ಮನ ಕಿತ್ತೂರು: ಸಮಯಕ್ಕೆ ಸರಿಯಾಗಿ ಬಸ್ ಬಾರದೇ ಇರುವುದರಿಂದ ತಾಲ್ಲೂಕಿನ ಕುಲವಳ್ಳಿ ಸೇರಿ ಒಂಬತ್ತು ಹಳ್ಳಿಗಳ ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ ಶಾಲೆ, ಕಾಲೇಜುಗಳಿಗೆ ತೆರಳಿದರೆ, ಮತ್ತೊಂದೆಡೆ ಮೇಟ್ಯಾಲ್ ಗ್ರಾಮದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸದೇ ಇರುವುದರಿಂದ ಬಸ್ ತಡೆದು ಗುರುವಾರ ಕೆಲಕಾಲ ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದಾರೆ.
‘ಕುಲವಳ್ಳಿಯ ಭಾಗದ ವಿದ್ಯಾರ್ಥಿಗಳು ಬೆಳಿಗ್ಗೆ ಚನ್ನಮ್ಮನ ಕಿತ್ತೂರು, ಅಳ್ನಾವರ ಪಟ್ಟಣಗಳಲ್ಲಿರುವ ಶಾಲೆ ಮತ್ತು ಕಾಲೇಜುಗಳಿಗೆ ಹೋಗುತ್ತಾರೆ. ಕುಲವಳ್ಳಿ ಮಾರ್ಗವಾಗಿ ಅಳ್ನಾವರಕ್ಕೆ ಸಂಚರಿಸುವ ಬಸ್ ಒಂದು ತಿಂಗಳಿಂದಲೂ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಹೀಗಾಗಿ ನಡೆದುಕೊಂಡು ಕತ್ರಿದಡ್ಡಿ ಪ್ರೌಢಶಾಲೆ, ಚನ್ನಮ್ಮನ ಕಿತ್ತೂರು ಮತ್ತು ಅಳ್ನಾವರ ಕಾಲೇಜುಗಳಿಗೆ ಹೋಗುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
‘ಕಿತ್ತೂರು ಮುಖ್ಯ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಸಮಸ್ಯೆ ಗಮನಕ್ಕೆ ತರಲಾಗಿದೆ. ಯಾರೂ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮತ ಕೇಳಲು ಮಾತ್ರ ಇಲ್ಲಿಗೆ ಬರುತ್ತಾರೆ’ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
‘ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಮತ್ತೆ, ಮತ್ತೆ ಕರೆ ಮಾಡಿದರೆ ಮೊಬೈಲ್ ಸ್ವೀಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಪ್ರಯಾಣಿಕರ ಸಮಸ್ಯೆ ಆಲಿಸಲು ಈ ಅಧಿಕಾರಿಗಳು ಇದ್ದಾರೋ, ಇಲ್ಲವೋ ಎಂಬುದನ್ನು ಜಿಲ್ಲಾ ನಿಯಂತ್ರಣಾಧಿಕಾರಿ ತಿಳಿಸಬೇಕು’ ಎಂದು ಗ್ರಾಮಸ್ಥ ರಿಯಾಜ್ ತಹಶೀಲ್ದಾರ್ ಕೇಳಿದರು.
ಹೆಚ್ಚುವರಿ ಬಸ್ ಬೇಕು: ಕಾಲೇಜಿಗೆ ತೆರಳಲು ತಾಲ್ಲೂಕಿನ ಮೇಟ್ಯಾಲ್ ಗ್ರಾಮಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಗುರುವಾರ ಕೆಲ ಕಾಲ ಬಸ್ ತಡೆದು ಪ್ರತಿಭಟನೆ ನಡೆಸಿದರು.
‘ಶಾಲೆ, ಕಾಲೇಜು ಆರಂಭವಾಗುವ ಮತ್ತು ಬಿಡುವ ವೇಳೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ಬಸ್ ಸಂಖ್ಯೆ ಹೆಚ್ಚಿಸಬೇಕಾಗಿದೆ. ಕಾಲೇಜು ಸಮಯಕ್ಕಿರುವ ಇದ್ದೊಂದು ಬಸ್ ಬಿಟ್ಟರೆ ಗೈರು ಆಗಿ ಉಳಿಯುವುದು ನಮಗಿರುವ ಏಕೈಕ ಮಾರ್ಗವಾಗಿದೆ. ಹೀಗಾಗಿ ಬಸ್ ಗೆ ಜೋತು ಬಿದ್ದುಕೊಂಡು ಸಂಚರಿಸುವಂತಾಗಿದೆ. ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ’ ಎಂದು ಈರಣ್ಣ ಕಿಲಾರಿ, ಆಕಾಶ ಹಿರೇಮಠ, ಬಸವರಾಜ ಹಂಪಣ್ಣವರ, ವಿಜಯ ಹುಜರಾತಿ, ವಿಜಯ ಹಿರೇಮಠ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.