ADVERTISEMENT

ಪರಿಹಾರ ನೀಡಲು ಲಂಚ ಕೇಳಿದರೆ ಜೋಕೆ

ಅಧಿಕಾರಿಗಳಿಗೆ ಶಾಸಕ ಅಭಯ ಪಾಟೀಲ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 15:09 IST
Last Updated 3 ನವೆಂಬರ್ 2019, 15:09 IST

ಬೆಳಗಾವಿ: ‘ದಕ್ಷಿಣ ಮತಕ್ಷೇತ್ರದಲ್ಲಿ ಉಂಟಾದ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಸರ್ಕಾರದಿಂದ ದೊರೆಯುವ ಪರಿಹಾರ ಕಲ್ಪಿಸಲು ಲಂಚ ಕೇಳುವ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಜೈಲಿಗೆ ಕಳುಹಿಸುತ್ತೇನೆ’ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದರು.

ಇಲ್ಲಿನ ಮಹಾವೀರ ಭವನದಲ್ಲಿ ಭಾನುವಾರ ನಡೆದ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅತಿವೃಷ್ಟಿಯಿಂದ ಬಿದ್ದಿರುವ ಮನೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ದೇಶದಲ್ಲೇ ಅತಿ ಹೆಚ್ಚು ಪರಿಹಾರ ನೀಡಿರುವ ಸರ್ಕಾರವಿದ್ದರೆ ಅದು ನಮ್ಮದು. ಭಾರಿ ಮಳೆಯಿಂದ ಮನೆಗೆ ಸ್ವಲ್ಪ ಹಾನಿಯಾದರೂ ಅವುಗಳನ್ನು ‘ಎ’ ವರ್ಗಕ್ಕೆ (ಸಂಪೂರ್ಣ ಹಾನಿ) ಸೇರಿಸುವಂತೆ ಕೋರಲಾಗಿದೆ’ ಎಂದರು.

ADVERTISEMENT

‘ದಕ್ಷಿಣ ಕ್ಷೇತ್ರದಲ್ಲಿ 751 ಮಗ್ಗಗಳು ಹಾಗೂ 2250 ಎಕರೆ ಬೆಳೆಗೆ ಹಾನಿಯಾಗಿದೆ. ಮನೆಗಳಿಗೆ ಹೆಚ್ಚಿನ ಪರಿಹಾರ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಂತೆಯೇ ಲಂಚ ಕೇಳುವವರನ್ನು ಜೈಲಿಗೆ ಕಳುಹಿಸದಿದ್ದರೆ ನಾನು ಶಾಸಕನೇ ಅಲ್ಲ. ಜನರು ಕೂಡ ಲಂಚ ಕೊಡಬಾರದು’ ಎಂದರು.

ಮುಖಂಡರಾದ ಮಂಗೇಶ ಪವಾರ, ಶಶಿಕಾಂತ ಪಾಟೀಲ, ಸಂತೋಷ ಟೋಪಗಿ, ಗಜಾನನ ಗುಂಜೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.