ADVERTISEMENT

ಬೆಳಗಾವಿ: ಪತ್ತೆಯಾಗದ ಚಿರತೆ– ಕೊನೆಯ ಯತ್ನ ವಿಫಲ, ಕಾರ್ಯಾಚರಣೆ ಕೈಬಿಡಲು ನಿರ್ಧಾರ

ಹೆಜ್ಜೆ ಗುರುತಿಗಾಗಿ ತಡಕಾಡಿದ 250 ಸಿಬ್ಬಂದಿ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 9:27 IST
Last Updated 4 ಸೆಪ್ಟೆಂಬರ್ 2022, 9:27 IST
   

ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನದ ಪೊದೆಯಲ್ಲಿ ಅವಿತ ಚಿರತೆಯ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸೇರಿ 250 ಮಂದಿ, ಎರಡು ಆನೆಗಳ ಸಮೇತ ಭಾನುವಾರ ಅಂತಿಮ ಹಂತದ ಕಾರ್ಯಾಚರಣೆ ನಡೆಸಿದರು. ಆದರೂ ಎಲ್ಲಿಯೂ ಚಿರತೆ ಸುಳಿವು ಸಿಗಲಿಲ್ಲ. ಒಂದು ತಾಸಿನ ಸುತ್ತಾಟದ ನಂತರ ಸ್ಥಳದಿಂದ ಮರಳಿದರು.

ಗಾಲ್ಫ್ ಮೈದಾನದ ಸುತ್ತ ಅಳವಡಿಸಲಾದ ಬಲೆಗಳು

ಕಳೆದ ಹತ್ತು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪತ್ತೆಯಾಗಿಲ್ಲ. 10 ಕಡೆ ಬೋನು ಇಟ್ಟಿದ್ದು ಅವುಗಳ ಆಸುಪಾಸು ಸುಳಿದಿಲ್ಲ. 22 ಕಡೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅವಡಿಸಿದ್ದು, ಹಗಲು- ರಾತ್ರಿಯೂ ಅದರಲ್ಲಿ ಚಿತ್ರ ಸೆರೆಯಾಗಿಲ್ಲ. ಮಳೆಯಿಂದಾಗಿ ಈ ಪ್ರದೇಶ ಕೆಸರುಮಯವಾಗಿದೆ. ಆದರೆ, ಎಲ್ಲಿಯೂ ಚಿರತೆ ಹೆಜ್ಜೆ ಗುರುತುಗಳೂ ಪತ್ತೆಯಾಗಿಲ್ಲ. ಹೀಗಾಗಿ, ಚಿರತೆ ಮರಳಿ ಕಾಡಿನ ಕಡೆಗೆ ಹೋಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಚಿರತೆ ಇದೆಯೋ ಇಲ್ಲವೋ ಎಂಬುದನ್ನು ಖಚಿತ ಮಾಡಿಕೊಳ್ಳಲು ಭಾನುವಾರ ಕೊನೆಯ ಹುಡುಕಾಟ ನಡೆಸಿದರು.

ADVERTISEMENT

ಒಂದು ತಿಂಗಳ ಇನ್ನಿಲ್ಲದ ಸರ್ಕಸ್:

ಆ.5ರಂದು ಇಲ್ಲಿನ ಜಾಧವ ನಗರಕ್ಕೆ ನುಗ್ಗಿದ ಚಿರತೆ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಇದರಿಂದ ಬೆಚ್ಚಿಬಿದ್ದ ಕಾರ್ಮಿಕನ ತಾಯಿ ಹೃದಯಾಘಾತದಿಂದ ಮೃತಪಟ್ಟರು. ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಕಾರ್ಯಾಚರಣೆಗೆ ಬೋನುಗಳನ್ನು ಇಟ್ಟು, ಹುಡುಕಾಟ ನಡೆಸಿದರು. ಎರಡು ವಾರದ ನಂತರ ಮತ್ತೆ ಕಾಣಿಸಿಕೊಳ್ಳಲಿಲ್ಲ. ಇದರಿಂದ ಸಿಬ್ಬಂದಿ ಕಾರ್ಯಾಚರಣೆ ಬಿಟ್ಟು ನಿರಾಳರಾದರು. ಆದರೆ, ಆ.22ರಂದು ನಡುರಸ್ತೆಯಲ್ಲೇ ಓಡಾಡಿದ ಚಿರತೆ ಮತ್ತೆ ನಗರವಾಸಿಗಳು ಬೆಚ್ಚಿಬೀಳುವಂತೆ ಮಾಡಿತು.

ಚಿರತೆ ಹೆಜ್ಜೆ ಗುರುತಿಗೆ ತಡಕಾಡಿದ ಸಿಬ್ಬಂದಿ

ಕಣ್ಣ ಮುಂದೆಯೇ ಚಿರತೆ ಓಡಾಡಿದರೂ ಅರಣ್ಯಾಧಿಕಾರಿಗಳು, ಸಿಬ್ಬಂದಿ ಸೆರೆ ಹಿಡಿಯುವಲ್ಲಿ ವಿಫಲವಾದರು.

ಬಳಿಕ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಿಂದ ಎರಡು ಆನೆಗಳು, ಹತ್ತು ಪರಿಣತ ಸಿಬ್ಬಂದಿಯನ್ನು ಕರೆಸಿ ಕಾರ್ಯಾಚರಣೆ ಆರಂಭಿಸಲಾಯಿತು. ಪೊದೆ ತೆರವು ಮಾಡಲು ಆರು ಜೆಸಿಬಿಗಳನ್ನು ನಿರಂತರ ಬಳಸಲಾಯಿತು.

ಚಿರತೆ ಸೆರೆ ಕಾರ್ಯಾಚರಣೆಗೆ ಭಾನುವಾರವೂ ಸುತ್ತಾಡಿ ಮರಳಿದ ಆನೆಗಳು

ಆ. 25ರಂದು ಜೆಸಿಬಿ ಮುಂದೆಯೇ ನೆಗೆದು ಪರಾರಿಯಾದ ಚಿರತೆ ಮತ್ತೆ ಇತ್ತ ಸುಳಿದಿಲ್ಲ. 170 ಎಕರೆ ವಿಸ್ತಾರವಾದ ಪೊದೆಯಲ್ಲಿ ಒಳಗೆ ಕಾಲಿಡುವುದಕ್ಕೆ ಆನೆಗಳಿಗೂ ಕಷ್ಟವಾದಂಥ ಸ್ಥಿತಿ ಇದೆ. ಹೀಗಾಗಿ, ಇಲಾಖೆಯ ಎಲ್ಲ ಕಸರತ್ತುಗಳೂ ವಿಫಲವಾದವು.

ಕಳೆದ ಒಂದು ತಿಂಗಳಿಂದ ಈ ಭಾಗದ 21 ಶಾಲೆಗಳಿಗೆ ರಜೆ ನೀಡಲಾಗಿದೆ. ಇದರಿಂದ 10 ಸಾವಿರ ಮಕ್ಕಳು ಒಂದು ತಿಂಗಳಿಂದ ಶಾಲೆಗಳಿಂದ ದೂರವೇ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.