ADVERTISEMENT

‘ರಕ್ಷಣಾ ಇಲಾಖೆ ನಿರ್ಲಕ್ಷ್ಯ: ಚಿರತೆ ಸೆರೆಗೆ ಅಡ್ಡಿ’

ಕಾರ್ಯಾಚಣೆಗೆ ಸಮನ್ವಯ ಸಾಧಿಸಲು ನೋಡಲ್‌ ಅಧಿಕಾರಿ ನೇಮಕಕ್ಕೆ ಮನವರಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:31 IST
Last Updated 29 ಆಗಸ್ಟ್ 2022, 19:31 IST
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಬೆಳಗಾವಿಯಲ್ಲಿ ಅವಿತರ ಚಿರತೆ ಸೆರೆ ಕಾರ್ಯಾಚರಣೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದರು
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಬೆಳಗಾವಿಯಲ್ಲಿ ಅವಿತರ ಚಿರತೆ ಸೆರೆ ಕಾರ್ಯಾಚರಣೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದರು   

ಬೆಳಗಾವಿ: ‘ಇಲ್ಲಿನ ಗಾಲ್ಫ್‌ ಮೈದಾನದ ಸುತ್ತ 270 ಎಕರೆ ಜಾಗ ರಕ್ಷಣಾ ಇಲಾಖೆಗೆ ಒಳಪಟ್ಟಿದೆ. ಅಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಚಿರತೆ ಅವಿತುಕೊಳ್ಳಲು ಸಾಧ್ಯವಾಗಿದೆ. ಇಲಾಖೆಯಿಂದ ಆದ ಈ ನಿರ್ಲಕ್ಷ್ಯವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಗಮನಕ್ಕೆ ತರಲಾಗುವುದು’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಚಿರತೆ ಕಾರ್ಯಾಚರಣೆಯ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾಹಿತಿ ‍ಪಡದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಕಷ್ಟು ಯತ್ನ ನಡೆಸಿದ್ದಾರೆ. ಆದರೆ, ಈ ಜಾಗ ರಕ್ಷಣಾ ಇಲಾಖೆಗೆ ಸೇರಿದ್ದರಿಂದ ಕಾರ್ಯಾಚರಣೆಗೆ ಹಿನ್ನಡೆ ಆಗುತ್ತಿದೆ. ಈ ಜಾಗ ಬಹಳ ವರ್ಷಗಳಿಂದ ಖಾಲಿ ಇದ್ದ ಕಾರಣ ವಿಷಜಂತುಗಳೂ ಮನೆಮಾಡಿವೆ. ವನ್ಯಮೃಗಗಳು ಅವಿತುಕೊಳ್ಳಲು ಸಾಧ್ಯವಾಗಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡುತ್ತೇನೆ’ ಎಂದರು.

ADVERTISEMENT

‘ಅರಣ್ಯ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಮಧ್ಯೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ಮಾಡುವುದು ಅಗತ್ಯವಾಗಿದೆ. ಹಾಗಾಗಿ, ಒಬ್ಬ ನೋಡಲ್‌ ಅಧಿಕಾರಿ ನೇಮಕ ಮಾಡಲು ಸಚಿವರಿಗೆ ಮನವರಿಕೆ ಮಾಡಿದ್ದೇನೆ’ ಎಂದರು.

‘750 ಎಕರೆ ವಿಸ್ತಾರದ ತುಮ್ಮರಗುದ್ದಿ ಬೆಟ್ಟವೂ ರಕ್ಷಣಾ ಇಲಾಖೆಯ ವಶದಲ್ಲಿದೆ. ಇದೇ ರೀತಿ ರಾಜ್ಯದ ಬೇರೆ ಬೇರೆ ನಗರಗಳಲ್ಲೂ ಸಾಕಷ್ಟು ಭೂಮಿ ಕೆಲಸಕ್ಕೆ ಬಾರದೇ ಬಿದ್ದಿದೆ. ಈ ಬಗ್ಗೆಯೂ ರಕ್ಷಣಾ ಸಚಿವರ ಗಮನ ಸೆಳೆದು, ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಲಾಗುವುದು’ ಎಂದು ಕಡಾಡಿ ತಿಳಿಸಿದರು.

ಕಾರ್ಯಾಚರಣೆಗೆ ಕೆಸರು ಅಡ್ಡಿ: ಶನಿವಾರ ಸುರಿದ ಧಾರಾಕಾರ ಮಳೆಯಿಂದ ಗಾಲ್ಫ್‌ ಮೈದಾನದ ಸುತ್ತಲಿನ ಪ್ರದೇಶ ಇನ್ನೂ ಕೆಸರುಮಯವಾಗಿದೆ. ಹೀಗಾಗಿ, ಭಾನುವಾರ ಹಾಗೂ ಸೋಮವಾರ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಎರಡೂ ಆನೆಗಳನ್ನು ಬಳಸಿ ಸೋಮವಾರ ಕೂಡ ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಯಾವುದೇ ಟ್ರ್ಯಾಪ್‌ ಕ್ಯಾಮೆರಾ ಅಥವಾ ಸಿಬ್ಬಂದಿ ಕಣ್ಣಿಗೆ ಚಿರತೆ ಕಂಡಿಲ್ಲ ಎಂದು ಮಾಹಿತಿ ನೀಡಿದರು.

*

‘ರಾಜೀನಾಮೆಯಿಂದ ಚಿರತೆ ಸಿಗುವುದೇ?’

‘ಚಿರತೆ ಸೆರೆ ಹಿಡಿಯಲಾಗದ ಹೊಣೆ ಹೊತ್ತು ಅರಣ್ಯ ಸಚಿವ ಉಮೇಶ ಕತ್ತಿ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ನ ಕೆಲವು ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸಚಿವರು ರಾಜೀನಾಮೆ ನೀಡಿದರೆ ಕಾಂಗ್ರೆಸ್‌ನವರು ಚಿರತೆ ಹಿಡಿಯುತ್ತಾರೆಯೇ?’ ಎಂದು ಈರಣ್ಣ ಕಡಾಡಿ ಪ್ರಶ್ನೆ ಮಾಡಿದರು.

‘ಚಿರತೆ ಅವಿತ ಪ್ರದೇಶದಲ್ಲಿ ಗದ್ದಲ ಮಾಡಬಾರದು ಎಂದು ಗೊತ್ತಿದ್ದರೂ ಕಾಂಗ್ರೆಸ್‌ನವರು ಕೂಗಾಡಿದ್ದಾರೆ. ಚುನಾವಣೆಗಳು ಬಂದಾಗ ಇಂಥ ‘ಡ್ರಾಮಾ’ ಮಾಡುವುದು ಅವರ ರೂಢಿ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.