ADVERTISEMENT

ಚಿಕ್ಕೋಡಿ: ತಂಗುದಾಣಗಳೋ.. ಜೀವ ಕಂಟಕಗಳೋ

ಚಿಕ್ಕೋಡಿ ಪಟ್ಟಣ, ತಾಲ್ಲೂಕಿನಲ್ಲಿ ಶಿಥಿಲಗೊಂಡ ತಂಗುದಾಣಗಳು: ಆತಂಕದಲ್ಲಿ ಪ್ರಯಾಣಿಕರು, ಗಮನಿಸುವರೇ ಜನಪ್ರತಿನಿಧಿಗಳು

ಪ್ರಜಾವಾಣಿ ವಿಶೇಷ
Published 28 ಜುಲೈ 2025, 2:51 IST
Last Updated 28 ಜುಲೈ 2025, 2:51 IST
ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಕ್ರಾಸ್‌ನಲ್ಲಿ ಸಂಕೇಶ್ವರ– ಜೇವರ್ಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಬಸ್ ತಂಗುದಾಣದ ಚಾವಣಿ ಹಾರಿ ಹೋಗಿದೆ
ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಕ್ರಾಸ್‌ನಲ್ಲಿ ಸಂಕೇಶ್ವರ– ಜೇವರ್ಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಬಸ್ ತಂಗುದಾಣದ ಚಾವಣಿ ಹಾರಿ ಹೋಗಿದೆ   

ಚಿಕ್ಕೋಡಿ: ತಾಲ್ಲೂಕು ವ್ಯಾಪ್ತಿಯ ಸಂಕೇಶ್ವರ- ಜೇವರ್ಗಿ ಹೆದ್ದಾರಿ ಹಾಗೂ ಪಟ್ಡಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಕೆಲವು ದಶಕಗಳ ಹಿಂದೆ ನಿರ್ಮಿಸಿದ ಬಹುತೇಕ ತಂಗುದಾಣಗಳು ನಿರ್ವಹಣೆಯ ಕೊರತೆ ಹಾಗೂ ಕಾಯಕಲ್ಪ ನೀಡದ ಹಿನ್ನೆಲೆಯಲ್ಲಿ ಶೋಚನೀಯ ಸ್ಥಿತಿಯಲ್ಲಿವೆ. ಮಳೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ತಂಗುದಾಣದ ಒಳಗಡೆ ನಿಲ್ಲುತ್ತಿದ್ದು, ಯಾವಾಗ ಏನು ಅನಾಹುತವಾಗುತ್ತದೆಯೋ ಎಂಬ ಆತಂಕ ಮನೆ ಮಾಡಿದೆ.

ಸಂಕೇಶ್ವರ– ಜೇವರ್ಗಿ ಹೆದ್ದಾರಿಯ ಸಿದ್ದಾಪೂರವಾಡಿ, ಚೆನ್ಯಾನದೊಡ್ಡಿ ಗ್ರಾಮದ ಬಳಿಯಲ್ಲಿರುವ ತಂಗುದಾಣದ ಸರಳುಗಳು ಹೊರ ಬಂದಿವೆ. ಸಿಮೆಂಟ್ ಉದುರಿ ಬೀಳುತ್ತಿದೆ. ಮಜಲಟ್ಟಿ ಕ್ರಾಸ್‌ನಲ್ಲಿರುವ ತಂಗುದಾಣದ ಸ್ಥಿತಿಯಂತೂ ದೇವರಿಗೇ ಪ್ರೀತಿ. ಛಾವಣಿ ಹಾರಿ ಹೋಗಿದ್ದರಿಂದ ತಂಗುದಾಣ ಇದ್ದೂ ಇಲ್ಲದಂತಾಗಿದೆ. ಸಹಸ್ರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಮಳೆ ಬಂದರೆ ಆಶ್ರಯಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಬಂದರೂ ಇನ್ನೂ ರಿಪೇರಿ ಮಾಡುತ್ತಿಲ್ಲ ಎಂಬುವದು ವಿದ್ಯಾರ್ಥಿಗಳ ಆರೋಪವಾಗಿದೆ.

ಮಾಂಜರಿ ಗ್ರಾಮದ ಬಳಿಯಲ್ಲಿ ನಿರ್ಮಾಣ ಮಾಡಿರುವ ತಂಗುದಾಣ ಸುಸಜ್ಜಿತವಾಗಿದ್ದರೂ ಬಳಕೆ ಮಾಡದೇ ಇರುವುದರಿಂದ ಹಂದಿ– ನಾಯಿಗಳ ತಾಣವಾಗಿ ಮಾರ್ಪಾಡಾಗಿದೆ. ಇದರ ಸುತ್ತಮುತ್ತಲಿನ ಜಾಗೆಯಂತೂ ಕಸದ ತೊಟ್ಟಿಯಾಗಿದೆ. ಅಂಕಲಿ ಗ್ರಾಮದಲ್ಲಿ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಪಕ್ಕದ ಮಾಂಜರಿ ಗ್ರಾಮದ ಬಸ್ ನಿಲ್ದಾಣದ ದುಸ್ಥಿತಿ ನೋಡಿದರೆ ಜನಪ್ರತಿನಿಧಿಗಳು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಧೋರಣೆ ತೋರುತ್ತಿದ್ದಾರೆ ಎಂಬುದು ಜನರ ದೂರು.

ADVERTISEMENT

ಸುಕ್ಷೇತ್ರ ಯಡೂರು ಗ್ರಾಮಕ್ಕೆ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಭಕ್ತರು ಸೇರಿದಂತೆ ಸಹಸ್ರಾರು ಪ್ರಯಾಣಿಕರು ಮಾಂಜರಿ ತಂಗುದಾಣವನ್ನು ಕಂಡು ಬೇಸರಗೊಳ್ಳುತ್ತಿದ್ದಾರೆ. ತಂಗುದಾಣ ನಿರ್ಮಿಸುವಾಗ ಇರುವ ಉತ್ಸಾಹ ಬಳಕೆಗೆ ಇರುವುದಿಲ್ಲ ಎಂಬುವದಕ್ಕೆ ಮಾಂಜರಿ ಬಸ್ ನಿಲ್ದಾಣ ಉತ್ತಮ ಉದಾಹರಣೆಯಾಗಿದೆ.

ಹಲವೆಡೆಗೆ ಬಸ್ ತಂಗುದಾಣಗಳಲ್ಲಿ ಕಸದ ರಾಶಿ ಕಾಣಬಹುದಾಗಿದ್ದು, ಇನ್ನು ಕೆಲವು ತಂಗುದಾಣದ ಒಳಗೂ, ಹೊರಗೂ ಕಸ ಬೆಳೆದು ನಿಂತಿರುವುದನ್ನು ಕಾಣಬಹುದಾಗಿದೆ. ಇಂತಹ ತಂಗುದಾಣಗಳನ್ನು ಬಳಸಲು ಪ್ರಯಾಣಿಕರು ಮುಜುಗುರ ಪಡಬೇಕಾಗಿದೆ. ಸರಿಯಾದ ನಿರ್ವಹಣೆ ಇಲ್ಲದ್ದರಿಂದಲೇ ಜನರು ಬಳಕೆಗೆ ಹಿಂಜರಿಯುವಂತಾಗಿದೆ.

ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿದ್ದ ಎರಡು ಬಸ್ ತಂಗುದಾಣಗಳು ಕಳೆದ ಕೆಲವು ವರ್ಷಗಳಿಂದ ಮಾಯವಾಗಿವೆ. ಇವುಗಳನ್ನು ಸೂಕ್ತ ಸ್ಥಳದಲ್ಲಿ ಪುನರ್ ನಿರ್ಮಾಣ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆ ಬಹುದಿನಗಳಿಂದ ಇದ್ದರೂ ಅದು ಇನ್ನೂ ಕಾರ್ಯಗತ ಆಗಿಲ್ಲದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಶಿಥಿಲಗೊಂಡ ತಂಗುದಾಣಗಳು ಕುಸಿದು ಬೀಳುವ ಮೊದಲು ಅಧಿಕಾರಿಗಳು, ಜನಪ್ರತಿನಿಧಿಗಳು ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ಅವುಗಳನ್ನು ಕೆಡವಿ ಹೊಸ ತಂಗುದಾಣಗಳನ್ನು ನಿರ್ಮಾಣ ಮಾಡಬೇಕಿದೆ. ಆಯಾ ಸ್ಥಳೀಯ ಸಂಸ್ಥೆಗಳು ಸೂಕ್ತ ನಿರ್ವಹಣೆ ಮಾಡಿದ್ದಲ್ಲಿ ಬಹುತೇಕ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿದೆ ಎಂಬ ಅರಿವು ಮೂಡಬೇಕಿದೆ.

ಜನಪ್ರತಿನಿಧಿಗಳೇಕೆ ಸುಮ್ಮನಿದ್ದಾರೆ?

ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕಿ ಆ ಇಲಾಖೆಯಿಂದ ಈ ಇಲಾಖೆಯವರೆಗೆ ನೆಪಗಳನ್ನು ಹೇಳಿ ದಾಟಿಕೊಳ್ಳಬಹುದು. ಆದರೆ ಅವರನ್ನು ನಿಯಂತ್ರಣದಲ್ಲಿ ಇಡಬೇಕಾದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ತಂಗುದಾಣಗಳು ಅಪಾಯಕ್ಕೆ ಆಹ್ವಾನ ನೀಡುವಂತಿದ್ದರೂ ಏಕೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂಬುದು ಪ್ರಯಾಣಿಕರ ಪ್ರಶ್ನೆ. ಪ್ರತಿಯೊಂದು ತಂಗುದಾಣವು ಆಯಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಚಾಯಿತಿ ಹಾಗೂ ಶಾಸಕರ ಜವಾಬ್ದಾರಿಯೇ ಆಗಿದೆ. ತಂಗುದಾಣಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಾರಿಗೆ ಇಲಾಖೆ ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಸಂಸ್ಥೆಗಳು ಮುಖ್ಯಮಂತ್ರಿಗಳ ವಿಶೇಷ ಅನುದಾನ ಶಾಸಕರ ಅನುದಾನ ಸೇರಿದಂತೆ ಸಾಕಷ್ಟು ಅವಕಾಶಗಳಿವೆ. ಕೆಲವು ಕಡೆ ನರೇಗಾ ಅನುದಾನದಲ್ಲೂ ಸುಭದ್ರ ತಂಗುದಾಣ ನಿರ್ಮಿಸಲಾಗಿದೆ. ಆದರೆ ಚಿಕ್ಕೋಡಿ ತಾಲ್ಲೂಕಿನಲ್ಲಿ ಮಾತ್ರ ಇದು ಇನ್ನೂ ಕನಸಾಗಿಯೇ ಉಳಿದಿದೆ. 

ಅಪಾಯಕ್ಕೆ ಯಾರು ಹೊಣೆ?

ಚಿಕ್ಕೋಡಿ ಪಟ್ಟಣ ಮಾತ್ರವಲ್ಲ; ತಾಲ್ಲೂಕಿನ ಹಲವು ಬಸ್‌ ನಿಲ್ದಾಣಗಳೂ ಅಪಾಯಕ್ಕೆ ತೆರೆದುಕೊಂಡಿವೆ. ಈ ಧಾರಾಕಾರ ಮಳೆಯಾಗುತ್ತಿದೆ. ಜನ ಬಸ್‌ ತಂಗುದಾಣಗಳಲ್ಲೇ ಆಶ್ರಯ ಪಡೆಯುವುದು ಅನಿವಾರ್ಯವಾಗಿದೆ. ಆಕಸ್ಮಿಕವಾಗಿ ತಂಗುದಾಣ ಶಿಥಿಲಗೊಂಡು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಮುಂದೆ ಇದಕ್ಕೆ ಯಾರು ಹೊಣೆ ಎಂಬ ಪ್ರಯಾಣಿಕರ ಪ್ರಶ್ನೆಗೆ ಉತ್ತರವೇ ಇಲ್ಲ.  ಮೇಲಾಗಿ ಹಳ್ಳಿಗಳಲ್ಲಿ ರಜೆಯ ದಿನ ಮಕ್ಕಳು ಇದೇ ಬಸ್‌ ನಿಲ್ದಾಣಗಳಲ್ಲಿ ಆಟವಾಡುತ್ತಾರೆ. ಗೋಡೆ ಚಾವಣಿಗಳು ಸಂಪೂರ್ಣ ಶಿಥಿಲಗೊಂಡಿದ್ದು ಯಾವಾಗ ಬೇಕಾದರೂ ಬೀಳಬಹುದು. ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ. ಅಪಾಯಕ್ಕೆ ತೆರೆದುಕೊಂಡ ತಂಗುದಾಣಗಳನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಲು ಮುಂದಾಗಬೇಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ‘ಪ್ರಜಾವಾಣಿ’ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಂಪರ್ಕಕ್ಕೆ ಸಿಗಲಿಲ್ಲ. 

ಸಿದ್ದಾಪೂರವಾಡಿ ಗ್ರಾಮದ ಬಳಿಯ ಬಸ್ ತಂಗುದಾಣದಿಂದ ಹೊರ ಬಂದಿರುವ ಕಬ್ಬಿಣದ ಸರಳುಗಳು
ಚಿಕ್ಕೋಡಿ ಪಟ್ಟಣದ ಹೊರವಲಯದ ಚೆನ್ಯಾನದೊಡ್ಡಿ ಕ್ರಾಸ್‌ನಲ್ಲಿ ದುರಸ್ತಿ ಕಾಣದೇ ಬೀಳುವ ಸ್ಥಿತಿಯಲ್ಲಿರುವ ಬಸ್ ತಂಗುದಾಣ
ಚಿಕ್ಕೋಡಿ ತಾಲ್ಲೂಕಿನ ಸಿದ್ದಾಪೂರವಾಡಿ ಗ್ರಾಮದ ಬಳಿಯಲ್ಲಿ ಶಿಥಲಗೊಂಡಿರುವ ಬಸ್ ತಂಗುದಾಣ
ಬಹುತೇಕ ತಂಗುದಾಣಗಳ ಸಮರ್ಪಕ ನಿರ್ವಹಣೆ ಇಲ್ಲ. ಬೀಳುವ ಸ್ಥಿತಿಯಲ್ಲಿದ್ದ ತಂಗುದಾಣಗಳನ್ನು ಕೆಡವಿ ಪುನರ್ ನಿರ್ಮಾಣ ಮಾಡಬೇಕು
–ಚಂದ್ರಕಾಂತ ಹುಕ್ಕೇರಿ, ಚಿಕ್ಕೋಡಿ ಸಾಮಾಜಿಕ ಕಾರ್ಯಕರ್ತ
ಕೆಲವೊಂದು ಕಡೆಗೆ ಬಸ್ ತಂಗುದಾಣಗಳು ಉತ್ತಮವಾಗಿದ್ದು ಜನರು ಬಳಸುತ್ತಿದ್ದಾರೆ. ಕೆಲವು ಅನಾಗರಿಕ ವರ್ತನೆಯಿಂದ ಕಸದ ರಾಶಿ ತುಂಬಿ ಬಳಕೆಗೆ ಅಸಹ್ಯಪಟ್ಟುಕೊಳ್ಳುವಂತಾಗಿದೆ.
–ಸುರೇಶ ಬ್ಯಾಕೂಡೆ, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.