ಚಿಕ್ಕೋಡಿ ಪಟ್ಟಣದ ಬಿಇಒ ಕಚೇರಿ ಆವರಣದಲ್ಲಿ ಸಿದ್ಧಗೊಂಡ ಇಂದಿರಾ ಕ್ಯಾಂಟೀನ್
ಪ್ರಜಾವಾಣಿ ಚಿತ್ರ
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ನಿರ್ಮಿಸಿದ ಕೃಷಿ ಇಲಾಖೆ ಕಚೇರಿ, ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಸಾರ್ವಜನಿಕ ಗ್ರಂಥಾಲಯ, ಇಂದಿರಾ ಕ್ಯಾಂಟೀನ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಒದಗಿಬಂದಿಲ್ಲ!
ಕೆಲವು ಕಟ್ಟಡಗಳು ನಾಲ್ಕು ತಿಂಗಳ ಹಿಂದೆ ಮುಗಿದಿದ್ದರೆ ಇನ್ನು ಕೆಲವು ಪೂರ್ಣಗೊಂಡು ವರ್ಷಗಳೇ ಉರುಳಿವೆ. ₹1.75 ಕೋಟಿ ಅನುದಾನದಲ್ಲಿ ಚಿಕ್ಕೋಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ₹5.70 ಕೋಟಿ ಮೊತ್ತದಲ್ಲಿ ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ₹40 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಗ್ರಂಥಾಲಯ, ₹20 ಕೋಟಿ ಅನುದಾನದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ₹27.20 ಕೋಟಿಯಲ್ಲಿ ಸದಲಗಾದಲ್ಲಿ ಕೇಂದ್ರೀಯ ವಿದ್ಯಾಲಯ ಸಿದ್ಧಗೊಳಿಸಲಾಗಿದೆ. ಇದರೊಂದಿಗೆ ಚಿಕ್ಕೋಡಿ ಪಟ್ಟಣದಲ್ಲಿ ಹೆಸ್ಕಾಂ ಕಚೇರಿ ಮುಂದೆ ಹಾಗೂ ಬಿಇಒ ಕಚೇರಿ ಆವರಣದಲ್ಲಿ ಎರಡು ಪ್ರತ್ಯೇಕ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿವೆ. ಆದರೆ, ಜನೋಪಯೋಗಿ ಆಗಿಲ್ಲ.
ಬೆಳಕು ಚೆಲ್ಲಿದ ‘ಪ್ರಜಾವಾಣಿ’:
ಚಿಕ್ಕೋಡಿಯ ತಾಯಿ– ಮಕ್ಕಳ ಆಸ್ಪತ್ರೆ ಹಾಗೂ ತಾಲ್ಲೂಕಿನ ಸದಲಗಾದ ಕೇಂದ್ರೀಯ ವಿದ್ಯಾಲಯ ಕುರಿತು ‘ಪ್ರಜಾವಾಣಿ’ ಮೇಲಿಂದ ಮೇಲೆ ಬೆಳಕು ಚೆಲ್ಲಿತು. ಪರಿಣಾಮ, ಉದ್ಘಾಟನೆಯಾಗದಿದ್ದರೂ ಇವು ಕಾರ್ಯಾರಂಭ ಮಾಡಿವೆ.
‘₹2.50 ಕೋಟಿ ವೆಚ್ಚದಲ್ಲಿ ಚಿಕ್ಕೋಡಿ ಪುರಸಭೆಗೆ ಕಟ್ಟಡ ನಿರ್ಮಾಣಗೊಂಡು 6 ವರ್ಷಗಳೇ ಕಳೆದಿದ್ದವು. ಈ ಬಗ್ಗೆ ‘ಪ್ರಜಾವಾಣಿ’ ಜನಧ್ವನಿ ಪ್ರಕಟಿಸಿತು. ತುರ್ತು ಕ್ರಮ ಕೈಗೊಂಡ ಶಾಸಕ ಗಣೇಶ ಹುಕ್ಕೇರಿ ಅವರು 2025ರ ಮಾರ್ಚ್ 28ರಂದು ಲೋಕಾರ್ಪಣೆಗೊಳಿಸಿದರು. ಆದರೆ, ಇದೂವರೆಗೆ ಹಳೆಯ ಕಟ್ಟದಿಂದ ಹೊಸ ಕಟ್ಟಡಕ್ಕೆ ಸಂಪೂರ್ಣ ಆಡಳಿತ ಸಲಕರಣೆಗಳು ಸ್ಥಳಾಂತರವಾಗಿಲ್ಲ’ ಎನ್ನುತ್ತಾರೆ ಪಟ್ಟಣವಾಸಿಗಳು.
ಅರ್ಧಕ್ಕೆ ನಿಂತ ಕಟ್ಟಡ:
ಪಟ್ಟಣದ ಇಂದಿರಾನಗರ ಗೇಟ್ ಬಳಿ 2013ರಲ್ಲಿ ₹1.17 ಕೋಟಿ ಅನುದಾನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ದೇವರಾಜ ಅರಸು ಭವನ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು, 12 ವರ್ಷಗಳಿಂದ ಹಾಗೇ ಉಳಿದಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಚಿಕ್ಕೋಡಿ ಪುರಸಭೆ ಕಚೇರಿ ಆವರಣದಲ್ಲಿ ತಲೆ ಎತ್ತಿದ ಸಾರ್ವಜನಿಕ ಗ್ರಂಥಾಲಯ
ಚಿಕ್ಕೋಡಿಯಲ್ಲಿ ನಿರ್ಮಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡ
ಕಟ್ಟಡಗಳನ್ನು ಬೇರೆ ಬೇರೆ ಇಲಾಖೆಗಳ ಅನುದಾನದಲ್ಲಿ ನಿರ್ಮಿಸಲಾಗಿದೆ. ಆಯಾ ಇಲಾಖೆಯ ಸಚಿವರ ಜತೆ ಚರ್ಚಿಸಿ ಶೀಘ್ರ ಉದ್ಘಾಟಿಸಲಾಗುವುದುಗಣೇಶ ಹುಕ್ಕೇರಿ ಶಾಸಕ ಚಿಕ್ಕೋಡಿ– ಸದಲಗಾ
ಪಟ್ಟಣದಲ್ಲಿ ಎರಡು ಇಂದಿರಾ ಕ್ಯಾಂಟೀನ್ ಸಿದ್ಧಗೊಂಡಿವೆ. ಸ್ಥಳೀಯ ಶಾಸಕರ ಅನುಮತಿ ಪಡೆದು ಶೀಘ್ರ ಜನಾರ್ಪಣೆ ಮಾಡಲಾಗುವುದುಜಗದೀಶ ಈಟಿ ಮುಖ್ಯಾಧಿಕಾರಿ ಪುರಸಭೆ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.