
ಚಿಕ್ಕೋಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ನಡೆಯುತ್ತಿರುವ ಸತ್ಯಾಗ್ರಹ ಬುಧವಾರ 10 ದಿನ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ರಾಜು ಪವಾರ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಲ್ಲಿ ರೈತರ ಸಮಸ್ಯೆ, ಜಿಲ್ಲಾ ಘೋಷಣೆ ಸೇರಿದಂತೆ ಪ್ರತಿಯೊಂದನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳುವ ಅನಿವಾರ್ಯತೆ ಸೃಷ್ಠಿಯಾಗಿದೆ. ಚಿಕ್ಕೋಡಿ ಜಿಲ್ಲೆಯನ್ನು ಘೋಷಣೆ ಮಾಡುವಂತೆ ಕಳೆದ 10 ದಿನಗಳಿಂದ ಸತ್ಯಾಗ್ರಹ ಮಾಡಲಾಗುತ್ತಿದ್ದರೂ, ಯಾವೊಬ್ಬ ಜನಪ್ರತಿನಿಧಿ ಇತ್ತ ತಿರುಗಿಯೂ ನೋಡದೇ ಇರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಚಂದ್ರಶೇಖರ ಅರಬಾಂವಿ ಮಾತನಾಡಿ, ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ, ಹುಕ್ಕೇರಿ, ನಿಪ್ಪಾಣಿ ಸೇರಿದಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಇನ್ನೊಂದೆಡೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು, ಮಾಜಿ ಸೈನಿಕರು, ವಿವಿಧ ಕನ್ನಡಪರ ಸಂಘಟನೆಗಳು ಪಟ್ಟಣದ ಮಿನಿವಿಧಾನಸೌಧದ ಮುಖ್ಯದ್ವಾರದ ಬಳಿಯಲ್ಲಿ ಕೆಲ ಕಾಲ ಕುಳಿತು ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವಂತೆ ಘೋಷಣೆ ಕೂಗುವ ಮೂಲಕ ಗಮನ ಸೆಳೆದರು.
ಸತ್ಯಾಗ್ರಹ ಕೈಗೊಂಡ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ ಪರಿಮಳಾ ದೇಶಪಾಂಡೆ ಅವರಿಗೆ ವಿವಿಧ ರೈತ ಸಂಘಟನೆಗಳು ಮನವಿ ಸಲ್ಲಿಸಿ, ಚಳಿಗಾಲ ಅಧಿವೇಶನದಲ್ಲಿಯೇ ಚಿಕ್ಕೋಡಿ ಜಿಲ್ಲೆಯನ್ನು ಘೋಷಣೆ ಮಾಡುವಂತೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮನೋಜ ಮನಗೂಳಿ, ಸಿದ್ರಾಮ ಕರಗಾಂವಿ, ಕಲಗೌಡ ಪಾಟೀಲ, ಸಿದ್ದು ಕಾಂಬಳೆ, ಸಂತೋಷ ಅಕ್ಕೆ, ಮಾಜಿ ಸೈನಿಕ ರಮೇಶ ಬಸ್ತವಾಡೆ, ಸಹದೇವ ಚಿತ್ತಡೆ, ಓಂಕಾರ ಕಮತೆ, ಸಕಿಗೌಡ ಬಸಗೌಡನವರ, ಹನುಮಂತ ಈಟಿ, ಸಂಜು ಬಡಿಗೇರ, ಸುರೇಶ ಬ್ಯಾಕೂಡ ಇತರರು ಇದ್ದರು.