ಚಿಕ್ಕೋಡಿ: ಪಟ್ಟಣದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಿಬ್ಬಂದಿ ಕಳೆದ ಐದು ವರ್ಷಗಳಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. 40 ವರ್ಷಗಳಷ್ಟು ಹಳೆಯದಾದ, ಶಿಥಿಲಗೊಂಡ ಕಟ್ಟಡ ಚಾವಣಿ ಯಾವಾಗ ಕತ್ತರಿಸಿಕೊಂಡು ತಲೆ ಮೇಲೆ ಬೀಳುತ್ತದೆಯೋ ಎಂಬ ಆತಂಕದಲ್ಲೇ ಕೆಲಸ ಮಾಡುವಂತಾಗಿದೆ.
ಈ ಕಚೇರಿಗೆ ಹೊಸ ಕಟ್ಟಡ ಮಂಜೂರಾಗಿ ಬಹುಪಾಲು ಕಾಮಗಾರಿ ಪೂರ್ಣಗೊಂಡಿದೆ. ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಆದರೆ, ಅಧಿಕಾರಿಗಳ ವಿಳಂಬ ಧೋರಣೆಯ ಕಾರಣ ಜೀವ ಭಯ ದಿನವೂ ಕಾಡುತ್ತಿದೆ.
ಮಳೆಗಾಲ ಪ್ರಾರಂಭವಾದರಂತೂ ಮಳೆ ನೀರು ಸಿಬ್ಬಂದಿ ತಲೆ ಮೇಲೆ ತೊಟ್ಟಿಕ್ಕುವುದು ಸಾಮಾನ್ಯವಾಗಿದೆ. ಚಾವಣಿಯ ಕಬ್ಬಿಣದ ಸರಳುಗಳು ಹೊರಗೆ ಇಣುಕಿ ನೋಡುತ್ತಿವೆ. ಹೀಗಾಗಿ ಚಾವಣಿ ಸಿಮೆಂಟ್ ಆಗಾಗ ಉದುರಿ ಬೀಳುತ್ತಿದೆ. ತೊಟ್ಟಿಕ್ಕುವ ಮಳೆ ಹನಿ ತಡೆಯಲು ಸಿಬ್ಬಂದಿಯು ಪಕ್ಕದಲ್ಲಿ ಬಕೆಟ್ ಇಟ್ಟುಕೊಂಡೇ ಕಾರ್ಯನಿರ್ವಹಿಸಬೇಕಾದ ದಯನೀಯ ಸ್ಥಿತಿ ಇದೆ.
ಕೂದಲೆಳೆ ಅಂತರದಲ್ಲೇ ಉಳಿದ ಜೀವ: 20ಕ್ಕೂ ಹೆಚ್ಚು ಸಿಬ್ಬಂದಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕು ವ್ಯಾಪ್ತಿಯ ನೂರಾರು ರೈತರು ಕೆಲಸ ಕಾರ್ಯಗಳ ನಿಮಿತ್ಯವಾಗಿ ಕಚೇರಿಗೆ ಬರುವವರಿಗೂ ಯಾವಾಗ ಏನು ಅನಾಹುತವಾಗುತ್ತದೆಯೋ ಎಂಬ ಭಯ ಇಲ್ಲದಿಲ್ಲ. ಹಲವು ಬಾರಿ ಚಾವಣಿ ಸಿಮೆಂಟ್ ಉದುರಿ ಕಂಪ್ಯೂಟರ್, ಪ್ರಿಂಟರ್, ಕಚೇರಿಯ ಕಡತಗಳ ಮೇಲೆ ಬಿದ್ದು ಹಾನಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಶೌಚಾಲಯದ ವಾಷ್ ಬಾಸಿನ್ ಮೇಲೆ ಮೇಲಿನಿಂದ ಇಟ್ಟಿಗೆ ಉದುರಿ ಬಿದ್ದಿದ್ದು ಸಿಬ್ಬಂದಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಸಹಾಯಕ ನಿರ್ದೇಶಕರ ಕೊಠಡಿ, ಸಿಬ್ಬಂದಿ ಕಾರ್ಯನಿರ್ವಹಿಸುವ ಕೊಠಡಿ, ಉಗ್ರಾಣ ಕೋಣೆ, ಕಚೇರಿಯ ಮುಂಭಾಗ ಸೇರಿದಂತೆ ಎಲ್ಲೆಡೆ ಚಾವಣಿ ಈಗಲೋ– ಆಗಲೋ ಬೀಳುವ ಹಂತದಲ್ಲಿದೆ. ಹೀಗಾಗಿ ಕಚೇರಿಯೊಳಗೆ ಹೋಗುವುದಕ್ಕೆ ಭಯ ಕಾಡುತ್ತಿದೆ. ಇನ್ನೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಪ್ರವೇಶಿಸುವುದಕ್ಕೆ ಹಿಂಜರಿಯುತ್ತಿದ್ದಾರೆ.
ಕಟ್ಟಡದ ಗೋಡೆಯೊಳಗೆ ಮಳೆ ನೀರು ಇಳಿದು ಉಬ್ಬಿಕೊಂಡಿವೆ. ಹೀಗಾಗಿ ಗೋಡೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಕಚೇರಿ ಆವರಣದಲ್ಲಿ ₹1.75 ಕೋಟಿ ವೆಚ್ಚದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕಟ್ಟಡ ಸಣ್ಣಪುಟ್ಟ ಕೆಲಸ ಹೊರತುಪಡಿಸಿದರೆ ಪೂರ್ಣಗೊಂಡು ನಿಂತಿದೆ.
ಕರ್ನಾಟಕ ಗೃಹ ಮಂಡಳಿ ಮಾರ್ಚ್– 2023ಕ್ಕೆ ಕಾಮಗಾರಿ ಪ್ರಾರಂಭಿಸಿ ಡಿಸೆಂಬರ್ 2024ಕ್ಕೆ ಪೂರ್ಣಗೊಳಿಸಬೇಕಿತ್ತು. ಒಂದೆರಡು ದಿನಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸದಿರುವುದೇ ನೂತನ ಕಚೇರಿ ಲೋಕಾರ್ಪಣೆಗೆ ವಿಳಂಬವಾಗುತ್ತಿದೆ ಎಂಬ ಆರೋಪ ಸಿಬ್ಬಂದಿ ಹಾಗೂ ಸಾರ್ವಜನಿಕರದಾಗಿದೆ.
ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಸಿಬ್ಬಂದಿ ಅಷ್ಟೇ ಅಲ್ಲದೇ ಸಾರ್ವಜನಿಕರೂ ಆತಂಕಕ್ಕೊಳಗಾಗಿದ್ದಾರೆಟಿ.ಎಸ್. ಮೋರೆ ಅಧ್ಯಕ್ಷ ಕೃಷಿಕ ಸಮಾಜ
ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಣ್ಣ ಪುಟ್ಟ ಕೆಲಸ ಮುಗಿಸಿ ಇಲಾಖೆಗೆ ಹಸ್ತಾಂತರಿಸಲು ಕರ್ನಾಟಕ ಗೃಹ ಮಂಡಳಿಗೆ ಪತ್ರ ಬರೆಯಲಾಗುವುದುಡಿ.ಬಿ. ಚವ್ಹಾಣ ಸಹಾಯಕ ಕೃಷಿ ನಿರ್ದೇಶಕ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.