
ಚಿಕ್ಕೋಡಿ: ಉಪ ವಿಭಾಗ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಬಹುತೇಕ ಕಚೇರಿಗಳನ್ನು ಹೊಂದಿರುವ ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ತಗ್ಗು ಗುಂಡಿಗಳಿಂದ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಮುಖ್ಯ ಸೇತುವೆಗಳೂ ಶಿಥಿಲಗೊಂಡಿದ್ದು ಅಪಾಯಕ್ಕೆ ಬಾಯ್ದೆರೆದು ನಿಂತಿವೆ.
ಪಟ್ಟಣದಿಂದ ನಿಪ್ಪಾಣಿ, ಹುಕ್ಕೇರಿ, ಕಾಗವಾಡ, ರಾಯಬಾಗ ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿಯೇ ಎಡು ಅಡಿ ಆಳದಷ್ಟು ಗುಂಡಿಗಳು ಇರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಮುಖ್ಯ ರಸ್ತೆಗಳಲ್ಲಿ ಲೋಕೋಪಯೋಗಿ ಇಲಾಖೆ ತೇಪೆ ಹಚ್ಚುವ ಕೆಲಸ ಮಾಡಿ ಕೈತೊಳೆದುಕೊಂಡಿದ್ದು, ಪ್ರಯಾಣಿಕರು, ಅದರಲ್ಲೂ ಬೈಕ್ ಸೇರಿದಂತೆ ಸಣ್ಣ ಪುಟ್ಟ ವಾಹನಗಳ ಸವಾರರು ಇಂತಹ ರಸ್ತೆಗಳಲ್ಲಿ ಪ್ರಯಾಸದ ಪ್ರಯಾಣ ಮಾಡದೇ ಬೇರೆ ವಿಧಿ ಇಲ್ಲ ಎನ್ನುವಂತಾಗಿದೆ. ಮುಖ್ಯ ರಸ್ತೆಗಳ ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಭಾಗವನ್ನು ಸಂಪರ್ಕಿಸುವ ಜಿಲ್ಲಾ ರಸ್ತೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ರಸ್ತೆಗಳು ಅಷ್ಟೇ ಅಲ್ಲದೇ, ಕೆಲವೊಂದು ಕಡೆಗೆ ಸೇತುವೆಗಳು ಶಿಥಿಲಗೊಂಡು ಸಾಕಷ್ಟು ಕಡೆಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ.
ಸಂಬಂಧಿಸಿದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆಲವೊಂದು ಕಡೆಗೆ ಸಾರ್ವಜನಿಕರೇ ಅಲ್ಲಲ್ಲಿ ಗುಂಡಿ ಮುಚ್ಚಿ ಸಂಚಾರ ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆಗೆ 1 ರಿಂದ 2 ಅಡಿಯಷ್ಟು ಆಳವಾದ ಗುಂಡಿಗಳು ಇದ್ದ ಸ್ಥಳದಲ್ಲಿ ಪ್ರಯಾಣಿಕರ ವಾಹನ ಗುಂಡಿಯೊಳಗೆ ಇಳಿಯದಿರಲಿ ಎಂಬ ಕಾರಣದಿಂದ ರಸ್ತೆ ಮೇಲೆ ಬೃಹತ್ ಕಲ್ಲು ಇರಿಸಿ, ಅದಕ್ಕೊಂದು ಕೆಂಪು ವಸ್ತ್ರ ಹೊದಿಸಿ ಪ್ರಯಾಣಕರಿಗೆ ಅನುಕೂಲತೆಯನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು ಹಲವು ಕಡೆಗೆ ಕಂಡು ಬರುತ್ತದೆ.
ಅಪಾಯಕಾರಿ ಸಂಚಾರ: ಕಳೆದ ಕೆಲವು ದಿನಗಳ ಹಿಂದೆ ವಾಹನವೊಂದು ಪಲ್ಟಿಯಾಗಿದ್ದು, ಇನ್ನೊಂದು ಬದಿಯಲ್ಲಿ ಶಿಥಿಲಗೊಂಡ ಗೋಡೆ ರಿಪೇರಿ ಮಾಡದೇ ಹೋದಲ್ಲಿ ಇಂತಹ ಘಟನೆ ಮತ್ತೇ ಮರುಕಳಿಸುವ ಸಾಧ್ಯತೆ ಇದೆ. ಇದೇ ರಸ್ತೆಯಿಂದ ಒಂದಿಷ್ಟು ಮುಂದೆ ಸಾಗಿದರೆ ಬೋರಗಲ್ ಬಳಿಯ ಕಲ್ಲು ಕಣಿವೆ ಬಳಿಯ ರಸ್ತೆಯಲ್ಲಿಯೂ ಗುಂಡಿಗಳು ಬಿದ್ದಿವೆ. ಮತ್ತೊಂದಿಷ್ಟು ಮುಂದೆ ಸಾಗಿದಲ್ಲಿ ನಿಡಸೋಸಿ-ಬೋರಗಲ್ ಗ್ರಾಮಗಳ ನಡುವೆ 2 ಅಡಿ ಆಳದಷ್ಟು ಬೃಹತ್ ಗುಂಡಿ ಬಿದ್ದಿದೆ.
ಗುಂಡಿಗಳು ಬಿದ್ದ ರಸ್ತೆಗಳಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್, ಎತ್ತಿನಗಾಡಿಗಳು ಸಾಗುವುದು ತಂತಿ ಮೇಲಿನ ನಡಿಗೆಯಂತಾಗಿದೆ. ಇಂತಹ ರಸ್ತೆಯಲ್ಲಿ ಸಂಚರಿಸುವವರಿಗೆ ಯಾವಾಗ ಏನು ಅನಾಹುತವಾಗುತ್ತದೆಯೋ ಎಂಬ ಭಯ ಕಾಡುತ್ತದೆ.
ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಅಪಾಯಕ್ಕೆ ಸಿಲುಕದರಿಲಿ ಎಂಬ ಉದ್ದೇಶದಿಂದ ಗುಂಡಿ ಬಳಿಯಲ್ಲಿ ಬೃಹತ್ ಕಲ್ಲು ಇರಿಸಿ, ವಾಹನಗಳ ಸುರಕ್ಷತೆ ಅರಿವು ಹೊಂದಿದ ಸಾರ್ವಜನಿಕರ ಜಾಗೃತಿಯು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಯಾಕೆ ಬರುತ್ತಿಲ್ಲ ಎಂಬುವುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಗುಂಡಿಗಳು ಇದ್ದ ಜಾಗೆಯಿಂದ ರಸ್ತೆಯ ಬದಿಯಲ್ಲಿ ವಾಹನ ಸವಾರರು ಸಂಚರಿಸುವ ಮೂಲಕ ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯ ಹುಡುಕಿದ್ದಾರೆ.
ನಿಪ್ಪಾಣಿ ತಾಲ್ಲೂಕಿನ ಬೋಜ-ಕಾರದಗಾ ಗ್ರಾಮದ ನಡುವೆ ಸೇತುವೆಯೊಂದು ಕುಸಿದು ಬಿದ್ದು 4 ತಿಂಗಳುಗಳೇ ಕಳೆದಿವೆ. ಈ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಾಗಾಟ ಮಾಡುವ ಟ್ರ್ಯಾಕ್ಟರ್ ಗಳು ಸಂಚರಿಸುತ್ತವೆ. ಬಸ್ಸು, ಲಾರಿ, ಕಾರ್ ಸೇರಿದಂತೆ ವಿವಿಧ ವಾಹನ ಸವಾರರು ಇಕ್ಕಟ್ಟಾದ ರಸ್ತೆಯಲ್ಲಿ ಕತ್ತಿ ಅಲಗಿನ ಮೇಲೆ ಸಂಚರಿಸಿದ ಅನುಭವವಾಗುತ್ತಿದೆ. ಶಿಥಿಲಗೊಂಡ ಸೇತುವೆಗಳ ಕಾಮಗಾರಿ ಗುಣಮಟ್ಟದಿಂದ ಮಾಡುವಂತೆ ಸ್ಥಳೀಯರ ಆಗ್ರಹವಾಗಿದೆ.
ಯಾರು ಏನೆಂದರು?
ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಹಲವು ಕಡೆಗೆ ಪ್ರಮುಖ ರಸ್ತೆಗಳಲ್ಲಿ ಆಳದ ಗುಂಡಿ ಬಿದ್ದಿದ್ದು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ.
–ಕೃಷ್ಣ ಕೆಂಚನ್ನವರ ಕೇರೂರ ಗ್ರಾಮದ ನಿವಾಸಿ
ಬೋಜ– ಕಾರದಗಾ ಗ್ರಾಮಗಳ ನಡುವೆ ಸೇತುವೆಯೊಂದು ಕುಸಿದು ಬಿದ್ದು ನಾಲ್ಕೈದು ತಿಂಗಳು ಕಳೆದಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಮತ್ತೆ ಮಳೆಗಾಲದಲ್ಲಿ ಕುಸಿಯುವಂತಾಗಬಾರದು.
–ರಮೇಶ ಪಾಟೀಲ ಬೋಜ ಗ್ರಾಮದ ನಿವಾಸಿ
ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚಾರ ಅಪಾಯಕ್ಕೆ ಆಹ್ವಾನವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಶಾಶ್ವತವಾಗಿ ಗುಂಡಿ ಮುಚ್ಚಿಸುವ ಜವಾಬ್ದಾರಿಯನ್ನು ಮೆರೆಯಬೇಕು.
–ಸಂಗೀತಾ ಖೋತ ಸ್ಥಳೀಯರು ಚಿಕ್ಕೋಡಿ
ತಾಲ್ಲೂಕಿನ ಬಸವನಾಳಗಡ್ಡಿ ಸೇರಿದಂತೆ ಕೆಲವೊಂದು ಕಡೆಗೆ ರಸ್ತೆ ಗುಂಡಿ ಬಿದ್ದಿದ್ದು ಗಮನಕ್ಕಿದೆ. ಗುಂಡಿ ಮುಚ್ಚಲು ಮುಂದಾದಾಗ ಸ್ಥಳೀಯರು ಮಾಡುವುದಾದರೆ ರಸ್ತೆ ಸುಧಾರಣೆ ಕಾಮಗಾರಿ ಪೂರ್ಣಪ್ರಮಾಣದಲ್ಲಿ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ನಿಧಿಯಲ್ಲಿ ಪೂರ್ಣಪ್ರಮಾಣದಲ್ಲಿ ಕಾಮಗಾರಿ ಕೈಗೊಳ್ಳಲಾಗುವದು
–ಎಸ್.ಕೆ. ಎಂಟೆತ್ತಿನವರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ
ಸೇತುವೆಗಳೂ ಅಧೋಗತಿ
ಮುಖ್ಯ ರಸ್ತೆಗಳಲ್ಲಿರುವ ಕೆಲವೊಂದು ಸೇತುವೆಗಳು ಶಿಥಿಲಗೊಂಡಿವೆ. ಸೇತುವೆಯ ಗೋಡೆಗಳು ಉರುಳುರುಳಿ ಬೀಳುತ್ತಿವೆ. ಚಿಕ್ಕೋಡಿ ತಾಲ್ಲೂಕಿನ ಜೈನಾಪೂರ ನಿಪ್ಪಾಣಿ ತಾಲ್ಲೂಕಿನ ಕಾರದಗಾ ಸೇರಿದಂತೆ ಹಲವು ಕಡೆಗೆ ಇಂತಹ ಸೇತುವೆಗಳನ್ನು ಕಾಣಬಹುದು. ಸೇತುವೆ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿದ್ದರೂ ಯಾವ ಕಡೆಯ ಗೋಡೆ ಬಿದ್ದಿದೆಯೋ ಆ ಕಡೆಗೆ ಮಾತ್ರ ಸೇತುವೆಗಳ ಗೋಡೆ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಸೇತುವೆಯ ಇನ್ನೊಂದು ಬದಿಯ ಗೋಡೆ ದುರಸ್ತಿ ಮಾಡದೇ ಹಾಗೇ ಬಿಟ್ಟಿದ್ದರಿಂದ ವಾಹನಗಳ ಸಂಚಾರ ಅಪಾಯಕಾರಿಯಾಗಿದೆ. ಪಟ್ಟಣದ ಹೊರವಲಯದ ಬಸವನಾಳಗಡ್ಡೆ ಪ್ರದೇಶದ ಬಳಿಯಲ್ಲಿ ಚಿಕ್ಕೋಡಿ– ಮಿರಜ್ ರಸ್ತೆಯಲ್ಲಿ 2 ಅಡಿಗೂ ಹೆಚ್ಚು ಆಳದ ತಗ್ಗು ಗುಂಡಿಗಳು ಬಿದ್ದು ಮೂರು ತಿಂಗಳಾಗಿದೆ. ಬೈಕ್ ಸವಾರರು ಪ್ರತಿನಿತ್ಯ ಗುಂಡಿಯೊಳಗೆ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಗುಂಡಿ ಇರುವ ಕುರಿತು ಗೊತ್ತಿಲ್ಲದ ಎಷ್ಟೋ ವಾಹನ ಸವಾರರು ಅಪಾಯ ಎದುರಿಸಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಜೈನಾಪೂರ ಗ್ರಾಮದ ಬಳಿಯಲ್ಲಿ ಚಿಕ್ಕೋಡಿ– ಬೆಳಗಾವಿ ರಸ್ತೆಯ ಸೇತುವೆಯೊಂದು ಶಿಥಿಲಗೊಂಡು ಒಂದು ವಾರದ ಹಿಂದೆ ಒಂದು ಬದಿಯ ಗೋಡೆ ಬಿದ್ದು ಹೋಗಿದೆ. ಸುಮಾರು 4 ದಶಕಗಳಷ್ಟು ಹಳೆಯದಾಗಿರುವ ಸೇತುವೆಯ ಒಂದು ಬದಿಯ ಗೋಡೆಯ ರಿಪೇರಿ ಕಾರ್ಯವನ್ನು ಸಂಬಂಧಿಸಿದ ಇಲಾಖೆ ಕೈಗೊಳ್ಳುತ್ತಿದ್ದು ಇದೇ ಸೇತುವೆಯ ಇನ್ನೊಂದು ಬದಿಯ ಗೋಡೆ ಶಿಥಿಲಗೊಂಡಿದ್ದರೂ ಅದನ್ನು ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.