ADVERTISEMENT

ಶಾಲೆ ಕೊಠಡಿ ನಿರ್ಮಾಣಕ್ಕೆ ತಲಾ ₹25 ಲಕ್ಷ ಅನುದಾನ ಮಂಜೂರು: ಪ್ರಕಾಶ ಹುಕ್ಕೇರಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:59 IST
Last Updated 6 ಸೆಪ್ಟೆಂಬರ್ 2025, 2:59 IST
ಚಿಕ್ಕೋಡಿಯ ಪರಟಿ ನಾಗಲಿಂಗೇಶ್ವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಕರಿಗೆ ಶಾಸಕ ಗಣೇಶ ಹುಕ್ಕೇರಿ, ಡಿಡಿಪಿಐ ಆರ್.ಎಸ್. ಸೀತಾರಾಮು ಮುಂತಾದವರು ಪ್ರದಾನ ಮಾಡಿದರು
ಚಿಕ್ಕೋಡಿಯ ಪರಟಿ ನಾಗಲಿಂಗೇಶ್ವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಕರಿಗೆ ಶಾಸಕ ಗಣೇಶ ಹುಕ್ಕೇರಿ, ಡಿಡಿಪಿಐ ಆರ್.ಎಸ್. ಸೀತಾರಾಮು ಮುಂತಾದವರು ಪ್ರದಾನ ಮಾಡಿದರು   

ಚಿಕ್ಕೋಡಿ: ‘ಗ್ರಾಮೀಣ ಪ್ರದೇಶದಲ್ಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ತಾಲ್ಲೂಕಿನ ವಾಳಕಿ, ಖಡಕಲಾಟ, ಜನವಾಡ, ಹಿರೇಕೋಡಿ ಹಾಗೂ ಕಮತೇನಹಟ್ಟಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲಾಗಿದ್ದು, ಪ್ರತಿ ಶಾಲೆಯಲ್ಲಿ 2 ಕೊಠಡಿ ನಿರ್ಮಾಣಕ್ಕೆ ತಲಾ ₹25 ಲಕ್ಷ ಅನುದಾನ ಮಂಜೂರಾಗಿದೆ’ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.

ಪಟ್ಟಣದ ಪರಟಿ ನಾಗಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಚಿಕ್ಕೋಡಿ ಡಿಡಿಪಿಐ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕ್ಷೇತ್ರ ವ್ಯಾಪ್ತಿಯ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತಿದ್ದು, ಶಿಕ್ಷಕರು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸುಧಾರಣೆ ತರಬೇಕು ಎಂದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ‘2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಟಾಪ್ 10 ಜಿಲ್ಲೆಗಳಲ್ಲಿ ಒಂದಾಗಿರಬೇಕು. ಶಿಕ್ಷಕರು ಹಾಗೂ ಇಲಾಖೆ ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು’ ಎಂದರು. 

ADVERTISEMENT

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮ ಲೋಕನ್ನವರ ಮಾತನಾಡಿದರು. ಬೆಳಗಾವಿ ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯಿಂದ 9 ಜನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ 8 ಜನ ಪ್ರೌಢ ಶಾಲಾ ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತರಾದ ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು.

ಪಟ್ಟಣದ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ, ಚಿಕ್ಕೋಡಿ ಡಿಡಿಪಿಐ ಆರ್.ಎಸ್. ಸೀತಾರಾಮು, ಡಿಡಿಪಿಯು ಪಾಂಡುರಂಗ ಭಂಡಾರಿ, ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ ರಾಜೇಶ ಬುರ್ಲಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎನ್ ಜಿ ಪಾಟೀಲ, ಬಿಇಒ ಪ್ರಭಾವತಿ ಪಾಟೀಲ, ಜಿನೇಂದ್ರ ನಿಲಜಗಿ, ಪುರಸಭೆ ಸದಸ್ಯ ರಾಮಾ ಮಾನೆ, ರವಿ ಹಂಪಣ್ಣವರ ಇದ್ದರು.

ನಿವೃತ್ತ ಶಿಕ್ಷಕರಿಗೆ ಸನ್ಮಾನ
ಕಾಗವಾಡ: ಉಗಾರ ಜೈನ ಸಮಾಜದ ಕಾರ್ಯಾಲಯದಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು. ಸಿದ್ದಲಿಂಗ ಶಿವಾಚಾರ್ಯ ವೇದಗಮ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಶ್ರೀಶೈಲ ಶಾಸ್ತ್ರೀ , ತಹಶೀಲ್ದಾರ್‌ ರವೀಂದ್ರ ಹಾದಿಮನಿ ಮಾತನಾಡಿದರು. ಇಒ ವೀರಣ್ಣ ವಾಲಿ, ಮೂಡಲಗಿ ಸಾಹಿತಿ ಸಂಗಮೇಶ ಗುಜಗೊಂಡ, ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಮದಭಾವಿ, ಸಿಡಿಪಿಒ ರವೀಂದ್ರ ಗುದಗೆನ್ನವರ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ಸಂಕಪಾಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಭಾವಿ, ಅಣ್ಣಾಸಾಹೇಬ ದೇವಮೋರೆ, ದೈಹಿಕ ಶಿಕ್ಷಾಧಿಕಾರಿ ಎಮ್.ವೈ.ಪೂಜಾರಿ ಇದ್ದರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಿಕ್ಷಕರ ಪಾತ್ರ ಮಹತ್ವದ್ದು: ಜಾರಕಿಹೊಳಿ

ಗೋಕಾಕ: ‘ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ’ ಎಂದು ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಹೇಳಿದರು.

ಇಲ್ಲಿನ ಮಹಾಲಕ್ಷ್ಮಿ ಸಭಾಭವನದಲ್ಲಿ ಡಾ.ರಾಧಾಕೃಷ್ಣನ ಅವರ ಜನ್ಮದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಸಮಾಜ ಗೌರವಿಸುವ ವ್ಯಕ್ತಿಗಳನ್ನಾಗಿಸಿ ದೇಶ ಕಟ್ಟುವ ಶಿಲ್ಪಿಗಳನ್ನಾಗಿಸಿದ್ದಾರೆ. ಗೋಕಾಕ ಶೈಕ್ಷಣಿಕ ವಲಯ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುರುಗಳ ಮಹತ್ವವನ್ನು ಹೆಚ್ಚಿಸುತ್ತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು.

ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.

ಜಿ.ಪಂ. ಮಾಜಿ ಸದಸ್ಯರಾದ ತುಕಾರಅಮ ಕಾಗಲ ಮತ್ತು ಮಡ್ಡೆಪ್ಪ ತೋಳಿನವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ತಹಶೀಲ್ದಾರ್‌ ಮೋಹನ ಭಸ್ಮೆ, ತಾ.ಪಂ. ಇ.ಒ. ಪರಶುರಾಮ ಘಸ್ತೆ, ತೋಟಗಾರಿಕೆ ಇಲಾಖೆಯ ಎಂ.ಎಲ್. ಜನ್ಮಟ್ಟಿ, ಎ.ಬಿ.ಮಲಬನ್ನವರ, ಎಂ.ಎಸ್‌.ಬಾಗಡಿ, ಎಸ್.ಪಿ. ವರಾಳೆ, ಬಿ.ಎಸ್.ಕುಡುವಕ್ಕಲಿಗ, ಎಲ್.ಕೆ. ತೋರಣಗಟ್ಟಿ, ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ವಿನಾಯಕ ಮಾಳಿ, ವಿವಿಧ ಶಿಕ್ಷಕ ಸಂಘಗಳ ಮುಖ್ಯಸ್ಥರಾದ ಎಂ.ವಿ. ಬಾಗೆನ್ನವರ, ಜಿ.ಆರ್. ಸನದಿ ಇದ್ದರು. ಬಿಇಒ ಜಿ.ಬಿ.ಬಳಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆರ್‌.ಎಂ.ಮಿರ್ಜಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.