ADVERTISEMENT

ಚಿಕ್ಕೋಡಿ: ಸಾರ್ವಜನಿಕ ಗ್ರಂಥಾಲಯ ಕಟ್ಟಡ ದುರಸ್ತಿಗೆ ನಿರ್ಲಕ್ಷ್ಯ

ಶಿರಗಾಂವದಲ್ಲಿ ಓದುಗರ ಪರದಾಟ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:05 IST
Last Updated 20 ನವೆಂಬರ್ 2025, 2:05 IST
ಚಿಕ್ಕೋಡಿ ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಕಂಬ  ಮುರಿದು, ಕಬ್ಬಿಣದ ಸರಳುಗಳು ಹೊರಬಂದಿರುವುದು
ಚಿಕ್ಕೋಡಿ ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಕಂಬ  ಮುರಿದು, ಕಬ್ಬಿಣದ ಸರಳುಗಳು ಹೊರಬಂದಿರುವುದು   

ಚಿಕ್ಕೋಡಿ: ತಾಲ್ಲೂಕಿನ ಶಿರಗಾಂವ ಗ್ರಾಮದ ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಕಂಬ ಮುರಿದು ಐದು ತಿಂಗಳಾಗಿದೆ. ಆದರೆ, ಈವರೆಗೂ ಅದನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. 

2007ರಿಂದ ಬಾಡಿಗೆ ಕಟ್ಟಡದಲ್ಲಿ ಇದು ಕಾರ್ಯ ನಿರ್ವಹಿಸುತ್ತಿತ್ತು. 2014-15ರಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು. 

ಐದು ತಿಂಗಳ ಹಿಂದೆ ಜಲಜೀವನ ಮಿಷನ್ ಯೋಜನೆ ಕಾಮಗಾರಿ ಕೈಗೊಳ್ಳಲು ಆಗಮಿಸಿದ್ದ ಜೆಸಿಬಿ ಯಂತ್ರವೊಂದು ಕಟ್ಟಡದ ಮುಂಭಾಗಕ್ಕೆ ಬಡಿದ ಕಾರಣ, ಕಂಬದ ಸರಳುಗಳು ಕಿತ್ತು ಹೊರಬಂದಿವೆ. ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿ ಇದ್ದರೂ, ‘ಇದಕ್ಕೂ ತಮಗೂ ಸಂಬಂಧವೇ ಇಲ್ಲ’ ಎಂಬಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವರ್ತಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

6 ಸಾವಿರಕ್ಕೂ ಅಧಿಕ ಪುಸ್ತಕ

ಗ್ರಂಥಾಲಯಲ್ಲಿ ಎರಡು ಕಂಪ್ಯೂಟರ್‌ಗಳಿದ್ದು, 6 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಪ್ರಮುಖ ದಿನಪತ್ರಿಕೆಗಳು, ನಿಯತಕಾಲಿಕೆಗಳು ಬರುತ್ತವೆ. ಇವುಗಳನ್ನು ಓದಲು ಪ್ರತಿದಿನ ನೂರಾರು ಓದುಗರು ಬರುತ್ತಾರೆ.

ಗ್ರಂಥಾಲಯಕ್ಕೆ ಹೊಂದಿಕೊಂಡು ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ, ಅದು ಸುಸ್ಥಿತಿಯಲ್ಲಿ ಇಲ್ಲ. ಕಿಡಿಗೇಡಿಗಳು ಅದನ್ನು ಮಲಿನಗೊಳಿಸುತ್ತಿದ್ದಾರೆ.

ನೀರಿನ ಘಟಕ ಹಾಗೂ ಗ್ರಂಥಾಲಯದ ಮಧ್ಯೆ ಇರುವ ಜಾಗದಲ್ಲಿ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬರುತ್ತಿದೆ. ಹಾಗಾಗಿ ಗ್ರಂಥಾಲಯಕ್ಕೆ ಆಗಮಿಸುವ ಓದುಗರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡೇ ಓದುವಂತಾಗಿದೆ.

‘ಗ್ರಂಥಾಲಯದ ಸುತ್ತಲಿನ ವಾತಾವರಣ ಶೀಘ್ರ ಶುಚಿಗೊಳಿಸಬೇಕು. ಮುರಿದು ಬಿದ್ದು ಸಿಮೆಂಟ್ ಕಂಬ ತೆರವುಗೊಳಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬೇಕು’ ಎಂಬದು ಓದುಗರ ಆಗ್ರಹ.

ಶಿರಗಾಂವ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಮಧ್ಯೆ ಇರುವ ಜಾಗ ಮಲಿನಗೊಂಡಿರುವುದು
- ರಫೀಕ್ ತಹಶೀಲ್ದಾರ ಫೋಟೊ
- ರಾಕೇಶ ಗೌಂಡಿ ಫೋಟೊ
ಗ್ರಂಥಾಲಯದ ಸುತ್ತಲಿನ ವಾತಾವರಣ ಶುಚಿಗೊಳಿಸಿ ಸಿಮೆಂಟ್‌ ಕಂಬ ದುರಸ್ತಿ ಮಾಡುವಂತೆ ಸಂಬಂಧಿತರಿಗೆ ಮನವಿ ಮಾಡಲಾಗಿದೆ. ಭರವಸೆ ಸಿಕ್ಕರೂ ಕಾರ್ಯರೂಪಕ್ಕೆ ಬಂದಿಲ್ಲ
ರಫಿಕ್‌ ತಹಶೀಲ್ದಾರ್‌ ಗ್ರಂಥಪಾಲಕ
ಗ್ರಂಥಾಲಯ ಕಟ್ಟಡದ ಕಂಬ ಮುರಿದು ಕಬ್ಬಿಣದ ಸರಳು ಹೊರಬಂದಿವೆ. ಆದರೂ ದುರಸ್ತಿ ಮಾಡುತ್ತಿಲ್ಲ
ರಾಕೇಶ ಗೌಂಡಿ ಓದುಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.