ADVERTISEMENT

ಕುಂದಾನಗರಿಯಲ್ಲಿ ಕ್ರಿಸ್‌ಮಸ್ ಸಂಭ್ರಮ

ಸಾಮೂಹಿಕ ಪ್ರಾರ್ಥನೆ; ಕಂಗೊಳಿಸಿದ ಚರ್ಚ್‌ಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 14:58 IST
Last Updated 24 ಡಿಸೆಂಬರ್ 2020, 14:58 IST
ಬೆಳಗಾವಿಯ ಫಾತಿಮಾ ಕೆಥಡ್ರಲ್ ಚರ್ಚ್‌ನಲ್ಲಿ ಗುರುವಾರ ಸಂಜೆ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತರು ಪಾಲ್ಗೊಂಡಿದ್ದರುಪ್ರಜಾವಾಣಿ ಚಿತ್ರ
ಬೆಳಗಾವಿಯ ಫಾತಿಮಾ ಕೆಥಡ್ರಲ್ ಚರ್ಚ್‌ನಲ್ಲಿ ಗುರುವಾರ ಸಂಜೆ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತರು ಪಾಲ್ಗೊಂಡಿದ್ದರುಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಸಂಭ್ರಮ ಮನೆ ಮಾಡಿದೆ. ವಿದ್ಯುದ್ದೀಪಾಲಂಕಾರದಿಂದ ಅವು ಕಂಗೊಳಿಸುತ್ತಿವೆ. ಕೋವಿಡ್–19 ಆತಂಕದಿಂದಾಗಿ ಈ ಬಾರಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ.

ನಕ್ಷತ್ರ ಬುಟ್ಟಿಗಳು ಚರ್ಚ್‌ಗಳಿಗೆ ಮೆರುಗು ನೀಡುತ್ತಿವೆ. ಚರ್ಚ್‌ ಆವರಣದಲ್ಲಿ ‘ಗೋದಲಿ’ ಮಾದರಿಗಳು ಆಕರ್ಷಿಸುತ್ತಿವೆ. ಕ್ರೈಸ್ತರ ಮನೆಗಳಲ್ಲಿಯೂ ‘ನಕ್ಷತ್ರ’ಗಳು ಸಂಭ್ರಮದಿಂದ ತೂಗುತ್ತಿವೆ.

ನಗರ ಹಾಗೂ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಹಾಗೂ ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಚರ್ಚ್‌ಗಳಿವೆ. ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಯಾಂಪ್‌ ಪ್ರದೇಶದಲ್ಲಿ ಸಂಭ್ರಮ ಇಮ್ಮಡಿಯಾಗಿದೆ. ಫಾತಿಮಾ ಕೆಥಿಡ್ರಲ್ ಚರ್ಚ್‌, ಐ.ಸಿ. ಚರ್ಚ್‌, ಸೇಂಟ್ ಅಂಥೋನಿ ಚರ್ಚ್‌, ಮೌಂಟ್‌ಕಾರ್ಮಲ್ ಚರ್ಚ್‌, ಸೇಂಟ್ ಮೇರಿ ಚರ್ಚ್‌, ಮೆಥೋಡಿಸ್ಟ್‌ ಚರ್ಚ್‌ ಸೇರಿದಂತೆ ಹಲವು ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.

ADVERTISEMENT

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಮಧ್ಯರಾತ್ರಿ ಬದಲಿಗೆ, ಸಂಜೆ 7ರಿಂದಲೇ ವಿಶೇಷ ಪ್ರಾರ್ಥನೆ ಜರುಗಿತು. ಪಾಲ್ಗೊಂಡಿದ್ದವರು, ಯೇಸುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಬೆಳಗಾವಿ ಧರ್ಮ ಪ್ರಾಂತ್ಯದ ಕೇಂದ್ರ ಸ್ಥಾನವಾದ ಕ್ಯಾಂಪ್‌ನ ಫಾತಿಮಾ ಕೆಥಡ್ರಲ್ ಚರ್ಚ್‌ನಲ್ಲಿ ಬಿಷಪ್‌ ಡೆರಿಕ್ ಫರ್ನಾಂಡೀಸ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಾಲ ಯೇಸು ಕ್ರಿಸ್ತನನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ಈ ಬಾರಿ ಗುರುವಾರ ಸಂಜೆಯೇ ನಡೆಯಿತು.

ಬಳಿಕ ಸಂದೇಶ ನೀಡಿದ ಬಿಷಪ್, ‘ಎಲ್ಲರೂ ಸೌಹಾರ್ದದಿಂದ ಇರಬೇಕು ಎಂಬ ಸಂದೇಶವನ್ನು ದೇವರು ನೀಡಿದ್ದಾರೆ. ಪ್ರತಿಯೊಬ್ಬರೂ ಇದನ್ನು ಪಾಲಿಸಿದರೆ, ನೆಮ್ಮದಿಯ ಬದುಕು ಸಾಗಿಸಬಹುದು. ಉಳ್ಳವರು ಬಡರಿಗೆ ದಾನ ಮಾಡಬೇಕು’ ಎಂದು ತಿಳಿಸಿದರು.

‘ಕ್ರಿಸ್‌ಮಸ್‌ ಹಬ್ಬವು ಪ್ರೀತಿ ಹಂಚುವುದು ಹಾಗೂ ಬೆಳಕು ಪಸರಿಸುವುದೇ ಆಗಿದೆ. ದೇವರ ಆಗಮನದ ಮೂಲಕ ಬೆಳಕು ಹರಡುವ ಸಮಯವಿದು. ಬಡವರಿಗೆ ಕೈಲಾದಷ್ಟು ನೆರವಾದರೆ ಮತ್ತು ಸಂಕಷ್ಟದಲ್ಲಿ ಇರುವವರನ್ನು ಆರೈಕೆ ಮಾಡಿದರೆ ದೇವರು ಸಂತೋಷಪಡುತ್ತಾನೆ. ತಪ್ಪೊಪ್ಪಿಗೆ ಹಾಗೂ ಕ್ಷಮಿಸುವ ಗುಣ ಬೆಳೆಸಿಕೊಳ್ಳುವ ಮೂಲಕ ಕ್ರಿಸ್‌ಮಸ್‌ ಅನ್ನು ಹೆಚ್ಚು ಅರ್ಥಪೂರ್ಣವಾಗಿಸಬೇಕು’ ಎಂದು ಸಲಹೆ ನೀಡಿದರು.

ಶಾಂತಿ ಹಾಗೂ ಒಳಿತಿಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಪಾಲ್ಗೊಂಡಿದ್ದವರು ಶುಭಾಶಯ ವಿನಿಮಯ ಮಾಡಿಕೊಂಡರು. ಮೋಂಬತ್ತಿಗಳನ್ನು ಬೆಳಗಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಇತರ ಧರ್ಮೀಯರೂ ಚರ್ಚ್‌ಗಳಿಗೆ ಬಂದು ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಶುಕ್ರವಾರವೂ ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.