ಜಗದೀಶ ಶೆಟ್ಟರ್
ಬೆಳಗಾವಿ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಧ್ಯೆ ಆಂತರಿಕ ತಿಕ್ಕಾಟ ಶುರುವಾಗಿದೆ. ಯಾವುದೇ ಹಂತದಲ್ಲಿ ಅಸಮಾಧಾನ ಸ್ಫೋಟವಾಗಿ ಸರ್ಕಾರ ಪತನವಾಗಬಹುದು’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಬೆಂಗಳೂರಿನಲ್ಲಿರುವ ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ರಾತ್ರಿ ಔತಣಕೂಟ ನಡೆದಿರುವ ಕುರಿತು, ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಈ ಆಂತರಿಕ ತಿಕ್ಕಾಟ ಇಂದಲ್ಲ, ನಾಳೆ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಮೊದಲೇ ಹೇಳಿದ್ದೆ. ಈಗ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋದಾಗ, ಸತೀಶ ಜಾರಕಿಹೊಳಿ ಮನೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು ಎಂದು ಸತೀಶ ಹೇಳಿದ್ದಾರೆ. ಅವರು ಹೇಳಿಕೆ ಕೊಡುವುದು, ಔತಣಕೂಟ ಆಯೋಜಿಸುವುದು, ಅದಕ್ಕೆ ಡಿಸಿಎಂ ಗೈರು ಆಗುವುದನ್ನು ಗಮನಿಸಿದರೆ, ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ನಡೆಯುತ್ತಿಲ್ಲ ಎಂಬುದು ಸಾಬೀತಾಗುತ್ತದೆ’ ಎಂದರು.
‘ಬಹುಮತ ಇದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಹೇಗೋ ನಡೆದಿದೆ. ಆದರೆ, ಸ್ವತಃ ಕಾಂಗ್ರೆಸ್‌ನ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅಭಿವೃದ್ಧಿ ಕೆಲಸ ನಿಂತುಹೋಗಿದೆ. ಹತ್ತಾರು ಸಾವಿರ ಕೋಟಿ ರೂಪಾಯಿ ಬಿಲ್ ಪಾವತಿಯಾಗದೆ ಗುತ್ತಿಗೆದಾರರು ಒತ್ತಡದಲ್ಲಿದ್ದಾರೆ’ ಎಂದು ದೂರಿದರು.
‘ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ವಿಫಲವಾದ ಕಾರಣ, ಜನರ ಮೇಲೆ ಭಾರ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ ದರ ಶೇ 15ರಷ್ಟು ಹೆಚ್ಚಿಸಿ, ಪ್ರಯಾಣಿಕರಿಗೆ ದೊಡ್ಡ ಹೊಡೆತ ಕೊಟ್ಟಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಹಾಗಾಗಿ ವಿವಿಧ ವಸ್ತುಗಳ ದರ ಹೆಚ್ಚಿಸಿ, ಜನರ ಮೇಲೆ ಹೊರೆ ಹಾಕುತ್ತಿದ್ದಾರೆ’ ಎಂದು ದೂರಿದರು.
‘ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಪ್ರಯಾಣ ಶುಲ್ಕವನ್ನು ಮೊದಲು ಸಾರಿಗೆ ಸಂಸ್ಥೆಗೆ ಭರಿಸಿ. ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳನ್ನು ನಷ್ಟದಿಂದ ಹೊರತನ್ನಿ. ಆಗ ಬಸ್‌ಗಳ ಪ್ರಯಾಣ ದರ ಏರಿಸುವ ಪ್ರಶ್ನೆಯೇ ಬರಲ್ಲ’ ಎಂದರು.
‘ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದರಿಂದಾಗಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಆರೋಪಿಗಳಿಗೆ ಜಾಮೀನು ಕೊಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಎಸ್‌ಡಿಎ ಆತ್ಮಹತ್ಯೆಗೆ ಕಾರಣವಾದ ಬೆಳಗಾವಿ ತಹಶೀಲ್ದಾರ್ ಬಸವರಾಜ ನಾಗರಾಳ, ಈಗ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಆ ಹುದ್ದೆ ನಿಯೋಜಿಸಲು ಬೇರೆ ಅಧಿಕಾರಿಗಳು ಇಲ್ಲವೇ? ಹೀಗಾದರೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.