ADVERTISEMENT

ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ ಸಿಎಂ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 7:18 IST
Last Updated 25 ಜುಲೈ 2021, 7:18 IST
ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ: ಯಡಿಯೂರಪ್ಪ ಭರವಸೆ
ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ: ಯಡಿಯೂರಪ್ಪ ಭರವಸೆ   

ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಪ್ರವಾಹದಿಂದ ಬಾಧಿತಗೊಂಡಿರುವ ಹಿರಣ್ಯಕೇಶಿ ನದಿ ಪಾತ್ರಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಶಂಕರಲಿಂಗ ಕಾರ್ಯಾಲಯದಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಮಾತನಾಡಿದರು.

ಸಂಕೇಶ್ವರ ಪಟ್ಟಣದಲ್ಲಿ ಪ್ರತಿವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಮನೆಗಳ ಶಾಶ್ವತ ಸ್ಥಳಾಂತರಕ್ಕೆ 50 ಎಕರೆ ಜಾಗ ಲಭ್ಯವಿದೆ. ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ADVERTISEMENT

ಸಂತ್ರಸ್ತರು ಸಹಕರಿಸಿದರೆ ಐವತ್ತು ಎಕರೆ ಜಾಗೆಯಲ್ಲಿ ಮನೆಗಳನ್ನು ಒದಗಿಸಲಾಗುತ್ತದೆ. ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದು ಜನರಿಗೆ ಸಂಕಷ್ಟ. ಸಂಕಷ್ಟಕ್ಕೆ ಒಳಗಾದ ಜನರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮಳೆಹಾನಿ ಸಮೀಕ್ಷೆ ಬಳಿಕ ಪರಿಹಾರ:ಮಳೆ ನಿಂತ ಬಳಿಕ ಮನೆ ಮನೆ ಸಮೀಕ್ಷೆ ಕೈಗೊಂಡು ನಂತರ ಸೂಕ್ತ ಪರಿಹಾರ ನೀಡಲಾಗುವುದು. ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಊಟೋಪಹಾರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ; ಸರ್ಕಾರ ನಿಮ್ಮ ಜೊತೆಗಿದೆ ಎಂದು ಅಭಯ ನೀಡಿದರು.

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಎನ್.ಡಿ.ಆರ್.ಎಫ್.‌ ಅಡಿ‌ ಪರಿಹಾರ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಇಲ್ಲಿನ 630 ಕುಟುಂಬಗಳಿಗೆ ತೊಂದರೆಯಾಗಿದ್ದು, ಐದು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಊಟೋಪಹಾರ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹುಕ್ಕೇರಿ ಮತಕ್ಷೇತ್ರದ ಶಾಸಕರೂ ಆಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹಾಜರಿದ್ದರು.

ಬಳಿಕ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿ ಅತಿವೃಷ್ಟಿಯಿಂದ ಮುಳುಗಡೆಯಾಗಿರುವ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.