ADVERTISEMENT

ಬೆಳಗಾವಿ | ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ: ಮುಖ್ಯಮಂತ್ರಿ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 21:19 IST
Last Updated 5 ಆಗಸ್ಟ್ 2024, 21:19 IST
<div class="paragraphs"><p>ಬೆಳಗಾವಿ ಜಿಲ್ಲೆಯ ಗೋಕಾಕ‌ದ ಸರ್ಕಾರಿ ಮುನ್ಸಿಪಲ್‌ ಕಾಲೇಜಿನಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ‌ ಸೋಮವಾರ ಭೇಟಿ ನೀಡಿದ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಸಂತ್ರಸ್ತರ ಸಮಸ್ಯೆ ಆಲಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು</p></div>

ಬೆಳಗಾವಿ ಜಿಲ್ಲೆಯ ಗೋಕಾಕ‌ದ ಸರ್ಕಾರಿ ಮುನ್ಸಿಪಲ್‌ ಕಾಲೇಜಿನಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ‌ ಸೋಮವಾರ ಭೇಟಿ ನೀಡಿದ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಸಂತ್ರಸ್ತರ ಸಮಸ್ಯೆ ಆಲಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು

   

 – ಪ್ರಜಾವಾಣಿ ಚಿತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ‘ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ ತಲಾ ₹1.20 ಲಕ್ಷ, ಭಾಗಶಃ‌ ಹಾನಿಯಾಗಿದ್ದರೆ ₹50 ಸಾವಿರ ಪರಿಹಾರ ನೀಡಲಾಗುವುದು. ಪೂರ್ಣ ಮನೆ ನಾಶವದವರಿಗೆ ಮನೆ ಕೂಡ ನಿರ್ಮಿಸಿಕೊಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ADVERTISEMENT

ಘಟಪ್ರಭಾ ನದಿ ಪ್ರವಾಹ ಬಾಧಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪದೇ ಪದೇ ಪ್ರವಾಹಕ್ಕೆ ಸಿಲುಕುವ ಸಂತ್ರಸ್ತರು ಸ್ಥಳಾಂತರಕ್ಕೆ ಒಪ್ಪಿದರೆ, ಬೇರೆ ಕಡೆ ಮನೆ ಕಟ್ಟಿಸಿಕೊಡುತ್ತೇವೆ. ಇಲ್ಲದಿದ್ದರೆ, ಹಳೆ ಮನೆ‌ ಬಿದ್ದ ಜಾಗದಲ್ಲೇ ವಸತಿ ಯೋಜನೆಯಡಿ ಹೊಸ ಮನೆ ಕಟ್ಟಿಸಿಕೊಡುತ್ತೇವೆ’ ಎಂದರು. ಗೋಕಾಕ, ಚಿಕ್ಕೋಡಿ, ಕಾಗವಾಡ ತಾಲ್ಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೂ ಭೇಟಿ ನೀಡಿದರು.

‘ಯಡಿಯೂರಪ್ಪ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ’:

‘ಯಡಿಯೂರಪ್ಪ ನನ್ನ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಅಷ್ಟೇ ಅಲ್ಲ, ಕತ್ತೆಯೇ ಸತ್ತು ಬಿದ್ದಿದೆ. ಅಂಥವರಿಗೆ ನನ್ನ ರಾಜೀನಾಮೆ ಕೇಳುವ ಹಕ್ಕು‌ ಇದೆಯೇ’ ಎಂದು ಸಿದ್ದರಾಮಯ್ಯ
ಪ್ರಶ್ನಿಸಿದರು.

‘ಯಡಿಯೂರಪ್ಪ ಅವರೇ ಸ್ವತಃ ಪೋಕ್ಸೊ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದು, ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. ಜಾಮೀನು‌ ಸಿಕ್ಕಿದ್ದಕ್ಕೆ ಹೊರಗಿದ್ದಾರೆ. ಇಲ್ಲದಿದ್ದರೆ ಜೈಲಿನಲ್ಲಿ ಇರಬೇಕಿತ್ತು’ ಎಂದು ಅವರು
ಹೇಳಿದರು.

‘ರಾಜಕೀಯ ಕಾನೂನಾತ್ಮಕ ಹೋರಾಟ’: ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಸಿದ್ದರಾಮಯ್ಯ ಅವರು ಮಾತನಾಡಿ, ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಆರೋಪದ ವಿರುದ್ಧ ಕಾನೂನಾತ್ಮಕ ಮತ್ತು ರಾಜಕೀಯ ಹೋರಾಟಕ್ಕೆ ನಾವು ಸಿದ್ಧವಾಗಿದ್ದೇವೆ. ರಾಜ್ಯಪಾಲರು ಕೊಟ್ಟ ಷೋಕಾಸ್ ನೋಟಿಸ್ ಹಿಂಪಡೆದು, ಅಬ್ರಹಾಂ ಕೊಟ್ಟ ದೂರು ತಿರಸ್ಕರಿಸಲು ಹೇಳಿದ್ದೇವೆ’ ಎಂದರು.

ರೈಲು ಹಳಿ ದುರಸ್ತಿ ಬಹುತೇಕ ಪೂರ್ಣ
ಹಾಸನ: ಬೆಂಗಳೂರು–ಮಂಗಳೂರು ಮಾರ್ಗದ ಯಡಕುಮೇರಿ ಮತ್ತು ಕಡಗರವಳ್ಳಿ ಮಧ್ಯೆ ರೈಲ್ವೆ ಹಳಿ ಬಳಿ ಭೂಕುಸಿತವಾಗಿದ್ದ ಸ್ಥಳದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಹಳಿ ಕೆಳಗೆ ಸುಮಾರು 500 ಮೀಟರ್‌ ಆಳಕ್ಕೆ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಕಲ್ಲಿನಿಂದ ಕ್ರಿಬ್‌ ಗೋಡೆ ನಿರ್ಮಿಸಲಾಗಿದೆ. ಹಳಿಯ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಭರದಿಂದ ಸಾಗಿದೆ. ಜುಲೈ 26ರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತವಾಗಿತ್ತು. ‘ಸತತ ಕಾರ್ಯಾಚರಣೆಯ ಬಳಿಕ ದುರಸ್ತಿ ಬಹುತೇಕ ಪೂರ್ಣಗೊಂಡಿದೆ.ಆಗಸ್ಟ್‌ 8ರವರೆಗೆ ಈ ಮಾರ್ಗದ ರೈಲುಗಳ ಸಂಚಾರ ರದ್ದುಗೊಳಿಸ ಲಾಗಿದ್ದು, ಆಗಸ್ಟ್‌ 9ರಿಂದ ಆರಂಭವಾಗುವ ಸಾಧ್ಯತೆ ಇದೆ’ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.
‘ಗುಡ್ಡ ಕುಸಿತ ತಡೆಗೆ ₹300 ಕೋಟಿ’
ಶಿವಮೊಗ್ಗ: ‘ರಾಜ್ಯದ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಅದನ್ನು ತಡೆಯಲು ಮುಂದಿನ ಎರಡು ವರ್ಷಗಳಲ್ಲಿ ₹300 ಕೋಟಿ ವ್ಯಯಿಸಲಿದ್ದೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ‘ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 55,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. 58 ಮಂದಿ ಸಾವಿಗೀಡಾಗಿದ್ದಾರೆ. ಬೆಳೆ ಹಾನಿ ಹಾಗೂ ಪ್ರಕೃತಿ ವಿಕೋಪದಿಂದ ಸಾವಿಗೀಡಾದವರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡುವಂತೆ ಆಯಾ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದೇನೆ. ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು ₹767 ಕೋಟಿ ಹಣ ಮೀಸಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.