ADVERTISEMENT

ಕಾಲೇಜಿನ ಪ್ರಾಜೆಕ್ಟೇ ಸ್ಟಾರ್ಟ್ಅಪ್ ಆಯ್ತು...

ಬೆಳಗಾವಿ ಯುವಕ ಆವಿಷ್ಕರಿಸಿದ ಅಗ್ಗದ ಫಿಲ್ಟರ್‌ಗೆ ಮನ್ನಣೆ

ಎಂ.ಮಹೇಶ
Published 27 ಜೂನ್ 2018, 11:28 IST
Last Updated 27 ಜೂನ್ 2018, 11:28 IST
ತಾವು ಆವಿಷ್ಕರಿಸಿರುವ ಫಿಲ್ಟರ್‌ ಜೊತೆ ನಿರಂಜನ್
ತಾವು ಆವಿಷ್ಕರಿಸಿರುವ ಫಿಲ್ಟರ್‌ ಜೊತೆ ನಿರಂಜನ್   

ಎಂಜಿನಿಯರಿಂಗ್ ವಿದ್ಯಾರ್ಥಿಗಳು ವ್ಯಾಸಂಗದ ಭಾಗವಾಗಿ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸುವುದು, ಕಾಲೇಜಿನ ಸಂಬಂಧಿಸಿದ ವಿಭಾಗಕ್ಕೆ ಸಲ್ಲಿಸುವುದು ಸಾಮಾನ್ಯ. ಆದರೆ, ಆ ಪ್ರಾಜೆಕ್ಟ್ ಇಟ್ಟುಕೊಂಡು ಬದುಕು ರೂಪಿಸಿಕೊಳ್ಳುವವರು ವಿರಳ. ಇಂಥವರ ಸಾಲಿಗೆ ಬೆಳಗಾವಿಯ ಎಂಜಿನಿಯರಿಂಗ್‌ ಪದವೀಧರ 23 ವರ್ಷದ ನಿರಂಜನ ಕಾರಗಿ ಸೇರುತ್ತಾರೆ. ಕಾಲೇಜಿನಲ್ಲಿ ಅಸೈನ್‌ಮೆಂಟ್‌ಗೆಂದು ರೂಪಿಸಿದ್ದ ಉಪಕರಣವನ್ನೇ ಇಟ್ಟುಕೊಂಡು ನವೋದ್ಯಮ (ಸ್ಟಾರ್ಟ್‌ಅಪ್‌) ರೂಪಿಸಿಕೊಂಡಿರುವ ಪ್ರತಿಭೆಯ ಯಶೋಗಾಥೆ ಇದು.

ಮನೆಯ ಎದುರಿನ ಸರ್ಕಾರಿ ಶಾಲೆಯಲ್ಲಿದ್ದ ಟ್ಯಾಂಕ್‌ನಲ್ಲಿ ಸೋರುತ್ತಿದ್ದ ನೀರನ್ನೇ ಮಕ್ಕಳು ಕುಡಿಯುತ್ತಿದ್ದರು. ಯೋಗ್ಯವಿಲ್ಲದಿದ್ದರೂ ಆ ನೀರು ಕುಡಿಯುತ್ತಿದ್ದುದು ಮರುಕ ಹುಟ್ಟಿಸಿತು. ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಜನರು ಹೀಗೆಯೇ ಕಲುಷಿತ ನೀರು ಸೇವಿಸುತ್ತಿರುವುದರಿಂದ ರೋಗ–ರುಜಿನಗಳಿಗೆ ಒಳಗಾಗುತ್ತಿದ್ದಾರೆ ಎನ್ನುವ ವಿಷಯ ಗೊತ್ತಾಯಿತು. ನೀರು ಶುದ್ಧೀಕರಣ ಸಾಧನಗಳು ದುಬಾರಿ ಆಗಿರುವುದನ್ನು ಅರಿತ ನಿರಂಜನ್, ಅಗ್ಗದ ದರಕ್ಕೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಕೈಗೊಂಡ ಆವಿಷ್ಕಾರ ಫಲ ನೀಡಿದೆ.

ನೀರು ಶುದ್ಧೀಕರಣಕ್ಕೆ ಕಡಿಮೆ ದರದ (₹ 30) ಉಪಕರಣವನ್ನು (ಫಿಲ್ಟರ್‌) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ್ದಾರೆ. ದೇಶ– ವಿದೇಶದಲ್ಲಿ ಮಾರುವ ಮೂಲಕ ತನ್ನದೇ ನವೋದ್ಯಮ ಆರಂಭಿಸಿದ್ದಾರೆ. ಈ ಅಗ್ಗದ ಫಿಲ್ಟರ್ ವಿದೇಶಿ ಕಂಪನಿಗಳ ಗಮನವನ್ನೂ ಸೆಳೆದಿದೆ.

ADVERTISEMENT

ಕಿರು ಬೆರಳಿನ ಗಾತ್ರದ್ದು:

ಅಲ್ಟ್ರಾಫಿಲ್ಟ್‌ರೇಶನ್‌ ಮೆಂಬ್ರೇನ್‌ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಕಿರು ಬೆರಳಿನ ಗಾತ್ರದ ಈ ಸಾಧನವನ್ನು ನೀರಿನ ಬಾಟಲಿಯ ಬಾಯಿಗೆ ಅಳವಡಿಸಬೇಕು. ಆ ಬಾಟಲಿಯನ್ನು ಉಲ್ಟಾ ಮಾಡಿದರೆ, ನೀರು ಶುದ್ಧೀಕರಣಗೊಳ್ಳುತ್ತಾ ತೊಟ್ಟಿಕ್ಕುತ್ತದೆ.

ಈ ಒಂದು ಫಿಲ್ಟರ್‌ನಿಂದ 100 ಲೀಟರ್‌ನಷ್ಟು ನೀರು ಶುದ್ಧೀಕರಿಸಬಹುದು. ಒಂದು ಫಿಲ್ಟರನ್ನು ಒಮ್ಮೆ ಬಳಸುವುದಕ್ಕೆ ಆರಂಭಿಸಿದರೆ 2 ತಿಂಗಳವರೆಗೆ ಉಪಯೋಗಿಸಬಹುದು. ಮೊದಲು ₹ 20 ದರ ನಿಗದಿಪಡಿಸಿದ್ದರು. ಜಿಎಸ್‌ಟಿ ಜಾರಿಯಾದ ನಂತರ ತೆರಿಗೆ ಸೇರಿ ₹ 30 ದರಕ್ಕೆ ಮಾರುತ್ತಿದ್ದಾರೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಇಷ್ಟು ಅಗ್ಗದ ಫಿಲ್ಟರ್‌ ಲಭ್ಯವಿಲ್ಲ. ಕಡಿಮೆ ಎಂದರೂ ₹ 400ರಿಂದ ₹ 500ರ ಮೇಲಿದೆ. ಈ ಉಪಕರಣ ಕುರಿತು ವಿದೇಶದವೂ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳ ಎದುರು ಹಾಗೂ ಶಾಲಾ–ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಪರಿಣಾಮ, ವಿವಿಧೆಡೆಯಿಂದ ಆರ್ಡರ್‌ ಕೂಡ ಬರುತ್ತಿವೆ.

ಲೇವಡಿ ಮಾಡಿದ್ದರು:

‘ಖಾಸಬಾಗ್‌ನ ನಮ್ಮ ಮನೆ ಎದುರಿನ ಸರ್ಕಾರಿ ಶಾಲೆ ಮಕ್ಕಳು ಕಲುಷಿತ ನೀರು ಕುಡಿಯುವುದನ್ನು ನೋಡಿದ್ದೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ ಬಾಟಲಿಗೆ ಅಳವಡಿಸುವ ಫಿಲ್ಟರ್‌ ಅಭಿವೃದ್ಧಿಪಡಿಸುವ ಯೋಚನೆ ಬಂತು. ಅಂಗಡಿ ತಾಂತ್ರಿಕ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿಯಲ್ಲಿ 6ನೇ ಸೆಮಿಸ್ಟರ್‌ನಲ್ಲಿದ್ದಾಗ ಈ ಯೋಜನೆ ಸಿದ್ಧಪಡಿಸಿದ್ದೆ. ಕೆಲವರು ಇದು ಮಕ್ಕಳಾಟ ಎಂದು ಲೇವಡಿ ಮಾಡಿದ್ದರು. ಆದರೆ, ಕಾಲೇಜಿನ ಅಧ್ಯಕ್ಷರೂ ಆಗಿರುವ ಸಂಸದ ಸುರೇಶ ಅಂಗಡಿ ಮೊದಲಾದವರು ಪ್ರೋತ್ಸಾಹಿಸಿದ್ದರು. ಆಗಿನ ಪ್ರಾಜೆಕ್ಟ್‌ ಈಗ ಜೀವನದ ದಿಕ್ಕನ್ನೇ ಬದಲಿಸಿದೆ. ಜನರಿಂದ ಮೆಚ್ಚುಗೆ ತಂದುಕೊಟ್ಟಿದೆ. ಬಡವರಿಗೂ ಶುದ್ಧ ನೀರು ಲಭ್ಯವಾಗುವಂತೆ ಆಗಬೇಕು ಎನ್ನುವುದು ನನ್ನ ಉದ್ದೇಶ’ ಎನ್ನುತ್ತಾರೆ ಅವರು.

2017ರಲ್ಲಿ ಪದವಿ ಮುಗಿಸಿದ ಅವರು, ಶಾಲೆಗಳು, ಕಂಪನಿಗಳ ಪ್ರತಿನಿಧಿಗಳಿಗೆ ಫಿಲ್ಟರ್ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದ್ದರು. ಈವರೆಗೆ 15ಸಾವಿರಕ್ಕೂ ಹೆಚ್ಚಿನ ಸಾಧನಗಳನ್ನು ಮಾರಿದ್ದಾರೆ.

ಆಕ್ಟಿವೇಟೆಡ್‌ ಕಾರ್ಬನ್‌ ಬಳಸಲಾಗಿರುವ ಈ ಫಿಲ್ಟರ್‌, ನೀರು ಶುದ್ಧೀಕರಣದ ಜೊತೆಗೆ ಶೇ 80ರಷ್ಟು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಬಣ್ಣ ಹಾಗೂ ವಾಸನೆ ಹೋಗಲಾಡಿಸುತ್ತದೆ. ಈ ನೀರು ಸೇವನೆಗೆ ಯೋಗ್ಯವಾಗುತ್ತದೆ ಎನ್ನುತ್ತಾರೆ ನಿರಂಜನ್‌.

ವಿದೇಶಿ ಮಾಧ್ಯಮದಲ್ಲೂ:

ಈ ಫಿಲ್ಟರ್‌ನ ವಿಷಯವನ್ನು ಅಮೆರಿಕದ ವಾಹಿನಿಯೊಂದು ಹಲವು ದೇಶಗಳಲ್ಲಿ ಪ್ರಸಾರ ಮಾಡಿತ್ತು. ಇದನ್ನು ಗಮನಿಸಿ ವಿದೇಶಗಳಿಂದಲೂ ಬೇಡಿಕೆ ಬಂದಿದೆ. ಆಫ್ರಿಕಾ, ಕತಾರ್‌ ಹಾಗೂ ಸಿಂಗಾಪುರದ ಕೆಲವು ಕಂಪನಿಗಳು ಈ ಫಿಲ್ಟರ್‌ ಖರೀದಿಸಿವೆ. ಫ್ರಾನ್ಸ್‌, ನ್ಯೂಜಿಲೆಂಡ್‌ ಕಂಪನಿಗಳ ಜೊತೆಗೆ ಮಾತುಕತೆ ನಡೆದಿದೆ. ಪ್ರಾತ್ಯಕ್ಷಿಕೆ ಮೆಚ್ಚಿಕೊಂಡ ಭಾರತೀಯ ಸೇನೆಯವರು ಕೂಡ ಸಾವಿರ ಫಿಲ್ಟರ್‌ಗಳನ್ನು ಖರೀದಿಸಿದ್ದಾರೆ. ಕೋಲ್ಕತ್ತದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ತನ್ನ ಪ್ರಯೋಗಶಾಲೆಯಲ್ಲಿ ಜಾಗದ ಸೌಲಭ್ಯ ಕಲ್ಪಿಸುವ ಭರವಸೆ ನೀಡಿ, ಬೆನ್ನು ತಟ್ಟಿದೆ.

ರಾಜ್ಯ ಸರ್ಕಾರದಿಂದ ಈಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಎಲಿವೇಟ್–100’ ಸಮಾವೇಶದಲ್ಲಿ ಈ ಸಾಧನಕ್ಕೆ ಪ್ರಶಸ್ತಿ ದೊರೆತಿದೆ. ನವೋದ್ಯಮಕ್ಕಾಗಿ ಸಹಾಯಧನ ಕೂಡ ಮಂಜೂರು ಮಾಡಿದೆ. ಹಲವು ಸಂಘ–ಸಂಸ್ಥೆಗಳು ಅವರನ್ನು ಗೌರವಿಸಿವೆ. ಝೀ ಕನ್ನಡ ವಾಹಿನಿಯು ಹೆಮ್ಮೆಯ ಕನ್ನಡಿಗ ಸನ್ಮಾನ ನೀಡಿದೆ.

₹ 12ಸಾವಿರ ಹೂಡಿಕೆಯಲ್ಲಿ:

‘ಆರಂಭದಲ್ಲಿ ₹ 12ಸಾವಿರ ಹೂಡಿಕೆಯಿಂದ ಸ್ಟಾರ್ಟ್‌ಅಪ್ ಆರಂಭಿಸಿದ್ದೆ. ಈಗ, ‘ನಿರ್–ನಲ್’ ಎನ್ನುವ ಹೆಸರಿನ ಕಂಪನಿ ನೋಂದಾಯಿಸಿ, ಇದನ್ನೇ ಉದ್ಯಮ ಮಾಡಿಕೊಂಡಿದ್ದೇನೆ. ಇದರಲ್ಲೇ ಮುಂದುವರಿಯುತ್ತೇನೆ. ಮುಖ್ಯವಾಗಿ ಸರ್ಕಾರಿ ಶಾಲಾ–ಕಾಲೇಜುಗಳಿಗೆ ಈ ಅಗ್ಗದ ದರದ ಫಿಲ್ಟರ್ ತಲುಪಿಸಬೇಕು ಎನ್ನುವ ಗುರಿ ಇದೆ’ ಎನ್ನುತ್ತಾರೆ ಅವರು.

‘ಪ್ರಸ್ತುತ, ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಫಿಲ್ಟರ್‌ ಸಿದ್ಧಪಡಿಸುತ್ತಿದ್ದೇವೆ. ಮೂವರು ಮಹಿಳೆಯರಿಗೆ ಕೆಲಸ ಕೊಟ್ಟಿದ್ದೇನೆ. ಆರು ಮಂದಿ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ ಮಾಡುತ್ತಿದ್ದಾರೆ. ಹಿಂದವಾಡಿಯಲ್ಲಿ ಕಚೇರಿ ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ನಿತ್ಯ 10ಸಾವಿರ ಸಾಧನಗಳನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ಹಲವು ಕಂಪನಿಗಳಿಗೆ ಪ್ರಾತ್ಯಕ್ಷಿಕೆ ನೀಡಿದ್ದೇನೆ. ಆರ್ಡರ್ ಪ್ರಮಾಣ ಹೆಚ್ಚಾಗುವ ವಿಶ್ವಾಸವಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೂ ಕರೆ ಮಾಡಿ, ಮೆಚ್ಚುಗೆಯ ಮಾತನಾಡಿದರು. ಅವರ ಸಾರಥ್ಯದ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದಲೂ ಫಿಲ್ಟರ್‌ಗಳನ್ನು ಖರೀದಿಸುವುದಾಗಿ ತಿಳಿಸಿದ್ದಾರೆ. ಕೆಲವು ವಿದೇಶಿ ಕಂಪನಿಗಳ ಸಿಇಒ ಜೊತೆಗೂ ಮಾತುಕತೆ ನಡೆಯುತ್ತಿದೆ’ ಎಂದರು ನಿರಂಜನ್.

‌ಮುಂದಿನ ದಿನಗಳಲ್ಲಿ, ಸುಧಾರಿತ ಅಲ್ಟ್ರಾಫಿಲ್ಟ್ರೇಷನ್‌ ತಂತ್ರಜ್ಞಾನದ ಫಿಲ್ಟರ್ ಆವಿಷ್ಕರಿಸುವ ಮತ್ತು ಮತ್ತಷ್ಟು ಮಂದಿಗೆ ಕೆಲಸ ನೀಡುವ ಯೋಜನೆ ಅವರದು.

ಸಂಪರ್ಕಕ್ಕೆ ಮೊ: 77953 39714.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.