ADVERTISEMENT

ಮುಸ್ಲಿಮರ ಅಭಿವೃದ್ಧಿಗೆ ಆಯೋಗಗಳ ಶಿಫಾರಸು ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 9:41 IST
Last Updated 18 ಡಿಸೆಂಬರ್ 2018, 9:41 IST

ಬೆಳಗಾವಿ:ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮರ ಅಭಿವೃದ್ಧಿಗಾಗಿ ರಚಿಸಲಾದ ಆಯೋಗಗಳು ನೀಡಿದ ಶಿಫಾರಸುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನವರು ಮಂಗಳವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಶೇ 10ರಷ್ಟು ಮೀಸಲಾತಿ ನೀಡಬೇಕು. ಪ್ರಸ್ತುತ ಶೇ 4ರಷ್ಟು ಮಾತ್ರ ಇದ್ದು, ಇದರಿಂದ ಹೆಚ್ಚಿನ ಅನುಕೂಲವಾಗುವುದಿಲ್ಲ. ಹೀಗಾಗಿ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಮಾದರಿಯಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು. ಅಲ್ಪಸಂಖ್ಯಾತರಿಗೆ ಹೆಚ್ಚಿನ ಬಜೆಟ್‌ ನೀಡಬೇಕು. ಗಲಭೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಮಾಯಕರ ಮೇಲೆ ಪ್ರಕರಣ ದಾಖಲಿಸುವುದನ್ನು ಬಿಡಬೇಕು. ಗಲಭೆಗಳ ಹಿಂದೆ ಯಾವ ರಾಜಕಾರಣಿಗಳ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಿ, ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ವಕ್ಫ್‌ ಮಂಡಳಿಗೆ ಸಮಾಜದ ಮುಖಂಡರ ಬದಲಿಗೆ ಅಧಿಕಾರಿಯನ್ನು ನೇಮಿಸಬೇಕು. ಅಲ್ಪಸಂಖ್ಯಾತರಿಗಾಗಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅದಕ್ಕೆ ಟಿಪ್ಪು ಸುಲ್ತಾನ್ ಅವರ ಹೆಸರಿಡಬೇಕು. ಅಲ್ಪಸಂಖ್ಯಾತರು ನಡೆಸುವ ಅನುದಾನಿತ ಪ್ರೌಢಶಾಲೆಗಳಲ್ಲಿ ಬೋಧಕ ಹಾಗೂ ಬೋಧಕೇತರರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಕೊಡಬೇಕು.ಮುಸ್ಲಿಮರ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ರಾಜ್ಯಘಟಕದ ಅಧ್ಯಕ್ಷ ದಸ್ತಗೀರ್ ಐ. ಆಗಾ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.