ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಕಾರ್ಯಾಲಯಗಳನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದು, ಉತ್ತರ ಕರ್ನಾಟಕ ಭಾಗದ ಜನತೆಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಮತ್ತು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
‘ಸಚಿವಾಲಯಗಳ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಹಾಗೂ ಪ್ರಮುಖ ಇಲಾಖೆಗಳ ರಾಜ್ಯ ಮಟ್ಟದ ಕಚೇರಿಗಳು ಇಲ್ಲಿಗೆ ಬರಬೇಕು. ವರ್ಷದ ಅರ್ಧ ಅವಧಿಯ ವಿಧಾನಸಭೆಯ ಅಧಿವೇಶನ ನಡೆಸಬೇಕು. ಇದರೊಂದಿಗೆ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಶಕ್ತಿ ಕೇಂದ್ರವಾಗಬೇಕು ಎಂಬ ಉದ್ದೇಶದಿಂದ ಸುವರ್ಣ ವಿಧಾನಸೌಧ ನಿರ್ಮಿಸಲಾಯಿತು. ಆದರೆ, ಸರ್ಕಾರದ ನಡೆಯು ಈ ಆಶಯಕ್ಕೆ ವಿರುದ್ಧವಾಗಿದೆ’ ಎಂದಿದ್ದಾರೆ.
‘ಇಲ್ಲಿನ ಮಠಾಧೀಶರು ಮತ್ತು ಸ್ವಾಮಿಜೀಗಳ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿ.ಎಸ್. ಯಡಿಯೂರಪ್ಪ ಮನವಿ ಸ್ವೀಕರಿಸಿದ್ದರು. ತಮ್ಮ ಸರ್ಕಾರ ಬಂದರೆ ರಾಜ್ಯ ಮಟ್ಟದ ಕಚೇರಿ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದರು. ಆದರೆ, ಪ್ರಮುಖ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿಲ್ಲ’ ಎಂದು ದೂರಿದ್ದಾರೆ.
‘ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ನಿರ್ಣಯ ರದ್ದುಪಡಿಸಿ ಕೂಡಲೇ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಮಠಾಧೀಶರು, ರಾಜಕೀಯ ಮುಖಂಡರೊಂದಿಗೆ ಪಕ್ಷಾತೀತವಾಗಿ ಆಂದೋಲನ ರೂಪಿಸಬೇಕಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.