ADVERTISEMENT

ಮನಮೋಹನ ಸಿಂಗ್‌ ಹೆಸರಲ್ಲಿ ಅರ್ಥಶಾಸ್ತ್ರ ಅಧ್ಯಯನ ಕೇಂದ್ರ: ಡಿ.ಕೆ.ಶಿವಕುಮಾರ್‌

ಬೆಳಗಾವಿಯಲ್ಲೇ ಶ್ರದ್ಧಾಂಜಲಿ ಸಲ್ಲಿಸಿದ ಕೆಪಿಸಿಸಿ ನಾಯಕರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 23:26 IST
Last Updated 27 ಡಿಸೆಂಬರ್ 2024, 23:26 IST
ಬೆಳಗಾವಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯರು ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು
ಬೆಳಗಾವಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯರು ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು   

ಬೆಳಗಾವಿ: ‘ಮಾಜಿ ಪ್ರಧಾನಿ, ಶ್ರೇಷ್ಠ ಅರ್ಥಶಾಸ್ತ್ರಜ್ಞ ಮನಮೋಹನ ಸಿಂಗ್‌ ಅವರ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು. ಜಗತ್ತಿನ ಎಲ್ಲೆಡೆಯಿಂದ ಆಸಕ್ತರು ಅಲ್ಲಿಗೆ ಅಧ್ಯಯನಕ್ಕೆ ಬರುವಂತೆ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕೆಪಿಸಿಸಿ ವತಿಯಿಂದ ಶುಕ್ರವಾರ ನಡೆದ ಮನಮೋಹನ ಸಿಂಗ್‌ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನಮೋಹನ ಸಿಂಗ್‌ ಅವರ ರೂಪದಲ್ಲಿ ನಾವು ಮತ್ತೊಬ್ಬ ಗಾಂಧಿ ಅವರನ್ನು ಕಳೆದುಕೊಂಡಿದ್ದೇವೆ’ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮನಮೋಹನ ಸಿಂಗ್ ಅವರ ಅಗಲಿಕೆ ಭಾರತಕ್ಕೆ ಅಷ್ಟೇ ಅಲ್ಲದೇ ಇಡೀ ಜಗತ್ತಿಗೆ ದೊಡ್ಡ ಹಾನಿ. ತಾವು ಬದುಕಿರುವಾಗ ಅಷ್ಟೊಂದು ಪ್ರಚಾರ ಸಿಗುವುದಿಲ್ಲ. ಸತ್ತ ಬಳಿಕ ಮಾಧ್ಯಮದವರು ಹೆಚ್ಚು ಪ್ರಚಾರ ಮಾಡುತ್ತಾರೆ ಎನ್ನುತ್ತಿದ್ದರು. ಆ ಮಾತು ನಿಜವಾಯಿತು’ ಎಂದರು.

ADVERTISEMENT

‘ಮನಮೋಹನ ಸಿಂಗ್ ಅಧಿಕಾರ ವಹಿಸಿಕೊಳ್ಳುವ ಮೊದಲು ದೇಶದ ಆರ್ಥಿಕತೆ ವಿಶ್ವಕ್ಕೆ ತೆರೆದುಕೊಂಡಿರಲಿಲ್ಲ. ಜಾಗತೀಕರಣ, ಉದಾರೀಕರಣ ನೀತಿಗಳ ಮೂಲಕ ಅವರು ಮುಕ್ತಗೊಳಿಸಿದರು. ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದರು’ ಎಂದರು.

‘ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ ಸಿಂಗ್ ಅವರನ್ನು ಆಯ್ಕೆ ಮಾಡಿದರು. ಹತ್ತು ವರ್ಷ ಕಾಲ ದೇಶವನ್ನು ಅತ್ಯಂತ ಸದೃಢವಾಗಿ ಮುನ್ನಡೆಸಿ, ಸೋನಿಯಾ ಗಾಂಧಿ ಅವರ ನಿರ್ಧಾರ ಎಷ್ಟು ಮುಂದಾಲೋಚನೆಯಿಂದ ಕೂಡಿತ್ತು ಎಂಬುದನ್ನು ಸಾಬೀತು ಮಾಡಿದರು’ ಎಂದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮಾತನಾಡಿ, ‘ಮನಮೋಹನ ಸಿಂಗ್ ಜಗತ್ತಿನ ಆರ್ಥಿಕ ಸೂರ್ಯ. ಅವರ ಅವಧಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಏರಿಕೆಯಾಗಿದ್ದು ಕಂಡು ಇಡೀ ಜಗತ್ತು ಬೆರಗಾಗಿತ್ತು. ಅವರ ಆರ್ಥಿಕ ನೀತಿಯನ್ನೇ ಮುಂದುವರಿಸಿದ್ದರೆ, ದೇಶ ಇಂದು ಮೊದಲ ಸ್ಥಾನದಲ್ಲಿ ಇರುತ್ತಿತ್ತು’ ಎಂದರು.

ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು. ಹಲವರು ಸಚಿವರು, ಶಾಸಕರು, ರಾಜ್ಯಸಭೆ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು, ಜನಪ್ರತಿನಿಧಿಗಳು, ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯರೂ ನಮನ ಸಲ್ಲಿಸಿದರು.

ಬೆಳಗಾವಿಯಲ್ಲಿ ಶುಕ್ರವಾರ ನಡೆದ ಮನಮೋಹನ ಸಿಂಗ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಮನಮೋಹನ ಸಿಂಗ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಅವರನ್ನೂ ‘ಜೂಮ್‌ ಆ್ಯಪ್‌’ ಮೂಲಕ ಪಾಲ್ಗೊಳ್ಳುವಂತೆ ಮಾಡಲು ಯೋಚಿಸಿದ್ದೆವು. ಆದರೆ ವಿಧಿ ನಮಗೆ ದುಃಖ ತಂದಿದೆ.
ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ

‘ಗಾಂಧಿ ಭಾರತ’ ವೇದಿಕೆಯಲ್ಲಿ ನೀರವತೆ

1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವಕ್ಕಾಗಿ ಇಲ್ಲಿನ ಸಿ.ಪಿ.ಇಡಿ ಮೈದಾನದಲ್ಲಿ ಹಾಕಿದ್ದ ‘ಗಾಂಧಿ ಭಾರತ’ ವೇದಿಕೆಯಲ್ಲೇ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಯಿತು. ‘ಜೈ ಬಾಪು ಜೈ ಭೀಮ್‌ ಜೈ ಸಂವಿಧಾನ’ ಘೋಷಣೆ ಅಡಿ ಸಮಾವೇಶ ಮಾಡಲು ಕಾಂಗ್ರೆಸ್‌ ಬೃಹತ್‌ ವೇದಿಕೆ ಸಿದ್ಧಪಡಿಸಿತ್ತು. ಒಂದು ವಾರದಿಂದ ಇಡೀ ನಗರದಲ್ಲಿ ಸಂಭ್ರಮ ಆವರಿಸಿತ್ತು. ಮನಮೋಹನ ಸಿಂಗ್‌ ಅವರ ಅಗಲಿಕೆ ಕಾರಣ ವರ್ಣರಂಜಿತ ವೇದಿಕೆಯಲ್ಲೂ ನೀರವತೆ ಆವರಿಸಿತು.

ನುಡಿ ನಮನದಲ್ಲೂ ಬಿಜೆಪಿ ಟೀಕೆ ಶ್ರದ್ಧಾಂಜಲಿ

ಸಮಾರಂಭದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ವ್ಯಕ್ತವಾಯಿತು. ಮನಮೋಹನ ಸಿಂಗ್‌ ಅವರ ಸಾಧನೆಗಳ ಕುರಿತ ಎರಡು ವಿಡಿಯೊ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ‘ದೇಶಕ್ಕೆ ಆರ್ಥಿಕ ಭದ್ರತೆ ನೀಡಿದ್ದು ಆಹಾರ ಭದ್ರತೆ ನೀಡಿದ್ದು ಉದ್ಯೋಗ ಭದ್ರತೆ ನೀಡಿದ್ದು ಮನಮೋಹನ ಸಿಂಗ್‌. ಆದರೆ ಅವರೆಂದೂ ಮೋದಿಯಂತೆ ಎದೆ ಬಡಿದುಕೊಂಡು ತಾವೇ ಮಾಡಿದ್ದು ಎಂದು ಹೇಳಿಕೊಳ್ಳಲಿಲ್ಲ’ ಎಂದು ಪ್ರಸಾರ ಮಾಡಲಾಯಿತು. ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞನನ್ನು ‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ‘ಮೌನಿಸಿಂಗ್‌’ ಎಂದೆಲ್ಲ ಅವಮಾನಿಸಲಾಯಿತು ಎಂದೆಲ್ಲ ಬಿಜೆಪಿಯ ಹೆಸರು ಪ್ರಸ್ತಾಪಿಸದೇ ಟೀಕಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.